ನವದೆಹಲಿ:ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಜೊತೆ ಬೆಕ್ಕು ಇಲಿ ಜೊತೆ ಆಡುವಂತೆ ನಡೆಸಿಕೊಳ್ಳುತ್ತಿದ್ದರು ಎಂದು ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಹೇಳಿದ್ದಾರೆ.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲೀ, ತೆಂಡೂಲ್ಕರ್ ಶೇನ್ ವಾರ್ನ್ ಬೌಲಿಂಗ್ಗೆ ತುಂಬಾ ಸುಲಭವಾಗಿ ಆಡುತ್ತಿದ್ದರು. ವಾರ್ನ್ರನ್ನು ಅವರು ಬೆಕ್ಕು ಇಲಿಯನ್ನು ಕಾಡಿಸುವ ರೀತಿಯಲ್ಲಿ ಕಾಡುತ್ತಿದ್ದರು. ಇದು ವಾರ್ನ್ ವಿಚಾರದಲ್ಲಿ ತುಂಬಾ ವಿರಳವಾಗಿತ್ತು ಎಂದಿದ್ದಾರೆ.
ಸಚಿನ್ ವಾರ್ನ್ ಬೌಲಿಂಗ್ ವೇಳೆ ವಿಕೆಟ್ ಮುಂದೆ ಬಂದು ಆಡುವ ಮೂಲಕ ವಾರ್ನ್ಗೆ ಶಾರ್ಟ್ ಬಾಲ್ ಮಾಡುವಂತೆ ಆಹ್ವಾನ ನೀಡುತ್ತಿದ್ದರು. ಕೆಲವೊಮ್ಮೆ ತಾಳ್ಮೆಯಿಂದ ಕಾದು ಪಾದದ ಚಲನೆಯ ಮೂಲಕ ಅದ್ಭುತ ಹೊಡೆತಗಳನ್ನು ಬಾರಿಸುತ್ತಿದ್ದರು ಎಂದು ಲೀ ಹೇಳಿದ್ದಾರೆ.
ವಿಶ್ವದ ಶ್ರೇಷ್ಠ ಬೌಲರ್ ವಾರ್ನ್ರೊಂದಿಗೆ ಸಚಿನ್ ಆಡಿದ ಬೆಕ್ಕು ಇಲಿ ಆಟ ಬೇರೆ ಯಾವ ಬ್ಯಾಟ್ಸ್ಮನ್ಗಳಿಂದ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ವಾರ್ನ್ ಪ್ರತಿಭಾವಂತ ಬೌಲರ್ ಆಗಿದ್ದರು. ಆದರೂ ಸಚಿನ್ ಆ ದಿನಗಳಲ್ಲೇ ವಾರ್ನ್ರನ್ನು ಕಾಡುತ್ತಿದ್ದರು ಎಂದು ಬ್ಯಾಟಿಂಗ್ ಲೆಜೆಂಡ್ ಬಗ್ಗೆ ಗುಣಗಾನ ಮಾಡಿದ್ದಾರೆ.
ಸಚಿನ್ ಮತ್ತು ವಾರ್ನ್ ಮುಖಾಮುಖಿಯಾದಾಗ ಸಚಿನ್ ವಿಕೆಟ್ ಪಡೆಯಲು ಸಾಧ್ಯವಾಗದೆ ಇದ್ದಂತಹ ಸಂದರ್ಭದಲ್ಲಿ ವಾರ್ನ್ ತುಂಬಾ ಕೋಪದಿಂದಿರುತ್ತಿದ್ದರು ಎಂದು ಬ್ರೆಟ್ ಲೀ ಹೇಳಿದ್ದಾರೆ.
ಇನ್ನು ಸಚಿನ್ ಕ್ಲಾಸ್ ಬ್ಯಾಟ್ಸ್ಮನ್ ಆಗಿದ್ದು, ಬೌಲರ್ ಹಾಗೂ ಅವರ ಮೈಂಡ್ಅನ್ನು ಚೆನ್ನಾಗಿ ತಿಳಿದುಕೊಂಡು ವಿವಿಧ ತಂತ್ರಗಾರಿಕೆ ಬಳಸಿ ಬ್ಯಾಟಿಂಗ್ ನಡೆಸುತ್ತಿದ್ದರು. ವಾರ್ನ್ ವಿಶ್ವದ ಎಲ್ಲಾ ಬ್ಯಾಟ್ಸ್ಮನ್ಗಳ ಕಣ್ಣಿಗೆ ಮಣ್ಣೆರೆಚುತ್ತಿದ್ದರು. ಆದರೆ ಸಚಿನ್ ಮುಂದೆ ಅದು ಸಾಧ್ಯವಾಗುತ್ತಿರಲ್ಲ. ನಾನು ಸಚಿನ್ ವಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಆದರೆ ಸಾಧ್ಯವಾಗಲಿಲ್ಲ ಎಂದು ವಾರ್ನ್ ಬಹಳಷ್ಟು ಸಾರಿ ನನಗೆ ಹೇಳಿದ್ದರು ಎಂದು ಲೀ ಹೇಳಿದ್ದಾರೆ.