ಬೆಂಗಳೂರು: ಭಾರತ ತಂಡದ ಮಾಜಿ ಸ್ಪಿನ್ ಬೌಲರ್ ಕನ್ನಡಿಗ ಸುನಿಲ್ ಜೋಶಿ ಭಾರತ ಹಿರಿಯರ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
2017ರ ಚಾಂಪಿಯನ್ ಟ್ರೋಫಿಯ ವೇಳೆ ಭಾರತ ತಂಡದ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ರಾಜಿನಾಮೆ ನೀಡಿದ ನಂತರ ಭಾರತ ತಂಡಕ್ಕೆ ಯಾವುದೇ ಸ್ಪಿನ್ ಬೌಲಿಂಗ್ ಕೋಚ್ ಆಯ್ಕೆ ಮಾಡಿಲ್ಲ. ಇದೀಗ 49 ವಯಸ್ಸಿನ ಕನ್ನಡಿಗ ಬೌಲಿಂಗ್ ಕೋಚ್ ಜವಾಬ್ದಾರಿ ನಿರ್ವಹಿಸಲು ಸಿದ್ದವಾಗಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಜೋಶಿ" ಹೌದು ನಾನು ಭಾರತ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂವರೆ ವರ್ಷಗಳ ಕಾಲ ಬಾಂಗ್ಲಾದೇಶ ತಂಡಕ್ಕೆ ಸ್ಪಿನ್ ಬೌಲಿಂಗ್ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದೇನೆ. ಈಗ ದೊಡ್ಡ ಸವಾಲನ್ನು ಸ್ವೀಕರಿಸಲು ಸಿದ್ದನಿದ್ದೇನೆ. ಭಾರತ ತಂಡಕ್ಕೆ ಯಾವುದೇ ಸ್ಪಿನ್ ಕೋಚ್ ಇಲ್ಲದಿರುವುದರಿಂದ ನನ್ನ ಅನುಭವದ ಆಧಾರದ ಮೇಲೆ ಕೋಚ್ ಸ್ಥಾನ ಲಭಿಸಬಹುದು ಎಂಬ ವಿಶ್ವಾಸದಲ್ಲಿದ್ದೇನೆ" ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ತಂಡಗಳಿಗೆ ಒಬ್ಬ ಬೌಲಿಂಗ್ ತಜ್ಞ ಅಗತ್ಯವಾಗಿ ಇರಲೇಬೇಕಿದೆ. ಅದರಲ್ಲಿ ಸ್ಪಿನ್ ಕೋಚ್ ಅಥವಾ ವೇಗದ ಬೌಲಿಂಗ್ ಕೋಚ್ ಖಂಡಿತಾ ಬೇಕಾಗಿದೆ. ಇದಕ್ಕೆ ನಾನಾಗಿರಬಹುದು ಅಥವಾ ಮತ್ತೊಬ್ಬರಾಗಿರಬಹುದು ಎಂದು ಬಾಂಗ್ಲಾದೇಶ ತಂಡದ ಕೋಚ್ ವಿಭಾಗದಿಂದ ಹೊರಬಂದಿರುವ ಜೋಶಿ ಹೇಳಿದ್ದಾರೆ.
ಜೋಶಿ 1996 ರಿಂದ 2001ರವರಗೆ ಭಾರತ ತಂಡದ ಪರ 15 ಟೆಸ್ಟ್ ಪಂದ್ಯಗಳನ್ನಾಡಿ 41 ವಿಕೆಟ್ ಪಡೆದಿದ್ದಾರೆ. 142 ರನ್ ನೀಡಿ 5 ವಿಕೆಟ್ ಪಡೆದಿರುವುದು ಉತ್ತಮ ಪ್ರದರ್ಶನವಾಗಿದೆ. 69 ಏಕದಿನ ಪಂದ್ಯಗಳಲ್ಲಿ 69 ವಿಕೆಟ್ ಪಡೆದಿದ್ದಾರೆ. 6 ರನ್ ನೀಡಿ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಇನ್ನು 160 ಪ್ರಥಮ ದರ್ಜೆ ಕ್ರಿಕೆಟ್ನಿಂದ 615 ವಿಕೆಟ್ ಪಡೆದಿದ್ದಾರೆ.
ಜೋಶಿ ಬಾಂಗ್ಲಾದೇಶ ತಂಡದ ಕೋಚ್ ಆದ ಮೇಲೆ ತಂಡದ ಸ್ಪಿನ್ ಬೌಲರ್ಗಳಾದ ಮೆಹೆದಿ ಹಸನ್, ಮೊಸದೆಕ್ ಹುಸೇನ್ ಮತ್ತು ಶಕಿಬ್ ಅಲ್ ಹಸನ್ ಅವರಲ್ಲಿ ಉತ್ತಮ ಬದಲಾವಣೆ ತಂದಿದ್ದರು. ಏಷ್ಯಾಕಪ್ ಹಾಗೂ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಬೌಲರ್ಗಳ ಉತ್ತಮ ಪ್ರದರ್ಶನದ ಹಿಂದೆ ಜೋಶಿ ಪಾತ್ರ ಪ್ರಮುಖವಾಗಿತ್ತು.