ಹೈದರಾಬಾದ್:ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನ ಪ್ರತಿನಿಧಿಸುತ್ತಿದ್ದ ಕನ್ನಡಿಗ ಸ್ಟುವರ್ಟ್ ಬಿನ್ನಿ ಕರ್ನಾಟಕ ತಂಡವನ್ನ ಬಿಟ್ಟು ನಾಗಾಲ್ಯಾಂಡ್ ತಂಡವನ್ನ ಸೇರಿಕೊಳ್ಳಲಿದ್ದಾರೆ.
ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಆಕ್ಷೇಪಣೆ ಇಲ್ಲವೆಂದು ಪ್ರಮಾಣಪತ್ರ ಪಡೆದಿರುವ ಬಿನ್ನಿ, ಶೀಘ್ರದಲ್ಲೆ ನಾಗಾಲ್ಯಾಂಡ್ ತಂಡವನ್ನ ಕೂಡಿಕೊಳ್ಳಲಿದ್ದಾರೆ. ಬಿನ್ನಿ ಜೊತೆಯಲ್ಲಿ ಮಹಾರಾಷ್ಟ್ರ ತಂಡದ ಯೋಗೇಶ್ ಟಕವಾಲೆ ಮತ್ತು ಶ್ರೀಕಾಂತ್ ಮುಂಡೆ ಕೂಡ ನಾಗಾಲ್ಯಾಂಡ್ ತಂಡ ಸೇರ್ಪಡೆಯಾಗಲಿದ್ದಾರೆ.
ದೇಶಿ ಕ್ರಿಕೆಟ್ನಲ್ಲಿ ನಾಗಾಲ್ಯಾಂಡ್ ಅತೀ ಕಡಿಮೆ ಅನುಭವ ಹೊದಿರುವ ತಂಡವಾಗಿದೆ. ಹೀಗಾಗಿ ಬೇರೆ ರಾಜ್ಯದ ಅನುಭವಿ ಆಟಗಾರನ್ನ ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ, ಕಿರಿಯರಿಗೆ ಮಾರ್ಗದರ್ಶನದ ಜೊತೆಯಲ್ಲಿ ನಾಗಾಲ್ಯಾಂಡ್ ತಂಡವನ್ನ ಬೆಳೆಸುವ ಗುರಿ ಹೊಂದಿದೆ.
ಈ ಬಗ್ಗೆ ಮಾತನಾಡಿರುವ ನಾಗಾಲ್ಯಾಂಡ್ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಎ.ರಹಮಾನ್, ನಮ್ಮ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಅನುಭವಿಗಳನ್ನ ಕರೆತರುವ ಉದ್ದೇಶ ಹೊಂದಿದ್ದೆವು. ಅದರಂತೆ ಬಿನ್ನಿ ಕೂಡ ನಮ್ಮ ತಂಡ ಸೇರಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.