ಕೊಲಂಬೊ: ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳು ಒಪ್ಪಿದರೆ ಜುಲೈನಲ್ಲಿ ಕ್ರಿಕೆಟ್ ಟೂರ್ನಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹೇಳಿದೆ.
'ನಾವು ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಈ ಕುರಿತು ಕ್ರಿಕೆಟ್ ಮಂಡಳಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ' ಎಂದು ಶ್ರೀಲಂಕಾ ಕ್ರಿಕೆಟ್ ಸಿಇಒ ಆಶ್ಲೇ ಡಿ ಸಿಲ್ವಾ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕ್ವಾರಂಟೈನ್ ಸೇರಿದಂತೆ ಹಲವು ಸವಾಲುಗಳನ್ನು ಆಟಗಾರರು ಎದುರಿಸಬೇಕಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಗಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆಗಲಿ ಇಲ್ಲಿಯವರೆಗೂ ಪ್ರವಾಸದ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಮೇ 31 ರವರೆಗೆ ವಿಮಾನ ಪ್ರಯಾಣ ಮತ್ತು ಜನರ ಸಂಚಾರದ ಮೇಲಿನ ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಂಡು, ಬಿಸಿಸಿಐ ಆಟಗಾರರಿಗೆ ಕೌಶಲ್ಯ ಆಧಾರಿತ ತರಬೇತಿ ಶಿಬಿರವನ್ನು ಆಯೋಜಿಸಲು ಇನ್ನಷ್ಟು ಸಮಯ ಕಾಯಲಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಬೋರ್ಡ್ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಪ್ರವಾಸದ ಬಗ್ಗೆ ನಿಖರ ಮಾಹಿತಿ ನೀಡುವ ಮೊದಲು ಆಟಗಾರರ ಸಿದ್ಧತೆ ಬಗ್ಗೆ ಕೇಳಲಿದ್ದೇವೆ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಸಿಇಒ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.
ಭಾರತವು ಜೂನ್ ಅಂತ್ಯದಲ್ಲಿ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿತ್ತು. ಬಾಂಗ್ಲಾದೇಶವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಮಿತ್ತ ಮೂರು ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು.