ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ಸಮಸ್ಯೆ ಸೇರಿದಂತೆ ಅಣ್ವಸ್ತ್ರ ಯುದ್ಧದ ಬಗ್ಗೆ ಪ್ರಸ್ತಾಪ ಮಾಡಿ ಹಲವು ಟೀಕೆಗೆ ಗುರಿಯಾಗಿದ್ದ ಪಾಕ್ ಪ್ರಧಾನಿ ಇಮ್ರಾನ್ಗೆ ಭಾರತ ತಂಡದ ಕ್ರಿಕೆಟ್ ಆಟಗಾರರು ಕೂಡ ಛೀಮಾರಿ ಹಾಕುತಿದ್ದಾರೆ.
ಇಮ್ರಾನ್ ಖಾನ್ ಅಮೆರಿಕಾ ಮಾಧ್ಯಮಗಳ ಎದುರು ಮಾತನಾಡುವಾಗ ಅಮೆರಿಕಾವನ್ನ ಅಣಕಿಸಿದ್ದಾರೆ. ಇಲ್ಲಿಗಿಂತಾ ಚೀನಾದಲ್ಲಿ ಉತ್ತಮವಾಗಿ ಅಭಿವೃದ್ಧಿಯಾಗಿದೆ ಎಂದಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಟಿವಿ ನಿರೂಪಕ ನೀವು ಪಾಕಿಸ್ತಾನದ ಪ್ರಧಾನಿಯಂತೆ ಮಾತನಾಡುತ್ತಿಲ್ಲ ಎಂದು ಇಮ್ರಾನ್ ಖಾನ್ರನ್ನ ಕಿಚಾಯಿಸಿದ್ದಾರೆ.
ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್, ಕಳೆದ ಕೆಲ ದಿನಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿ ಅವಮಾನಕ್ಕೊಳಗಾಗಿದ್ದ ಇಮ್ರಾನ್ ಖಾನ್, ತಮ್ಮನ್ನು ತಾವೇ ಅವಮಾನಿಸಿಕೊಳ್ಳಲು ಅವರೇ ಮತ್ತೆ ಕೆಲವು ದಾರಿಗಳನ್ನ ಹುಡುಕಿಕೊಳ್ಳುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ವೀರೂ ಮಾಡಿರುವ ಟ್ವೀಟ್ಗೆ ರೀ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಈ ವಿಡಿಯೋ ನೋಡಿ ನನಗೆ ಶಾಕ್ ಆಯ್ತು. ಇಡೀ ಪ್ರಪಂಚವೇ ಶಾಂತಿಯನ್ನ ಕೋರುತ್ತಿದೆ. ಆದರೆ, ಪಾಕಿಸ್ತಾನದ ಪ್ರಧಾನಿಯಾಗಿ ಹೀಗೆ ಮಾತನಾಡುವುದು ಸರಿಯಲ್ಲ. ಇಡೀ ಕ್ರಿಕೆಟ್ ಪ್ರಪಂಚಕ್ಕೆ ಗೊತ್ತಿರುವ ಇಮ್ರಾನ್ ಖಾನ್ ಇವರಲ್ಲ ಎಂದಿದ್ದಾರೆ.
ಇನ್ನು, ಪಾಕ್ ಪ್ರಧಾನಿ ಮಾತಿಗೆ ಹರ್ಭಜನ್ ಸಿಂಗ್, ಮೊಹ್ಮದ್ ಶಮಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ಬೇಕಿರುವುದು ಅಭಿವೃದ್ಧಿ ಕುರಿತು ಮಾತನಾಡುವ ನಾಯಕ, ಯುದ್ಧವನ್ನ ಕುರಿತು ಮಾತನಾಡುವ ವ್ಯಕ್ತಿಯಲ್ಲ ಎಂದಿದ್ದಾರೆ.