ಮೇಲ್ಬೋರ್ನ್: ಶ್ರೀಲಂಕಾದ ಆಲ್ರೌಂಡರ್ ಶಶಿಕಲಾ ಸಿರಿವರ್ದೆನೆ ತಮ್ಮ 17 ವರ್ಷದ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದ 16 ರನ್ಗಳಿಗೆ 4 ವಿಕೆಟ್ ಪಡೆದು ತಂಡವನ್ನು ಗೆಲ್ಲಿಸಿದ ಸಿರಿವರ್ದೆನೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಪಂದ್ಯ ಗೆದ್ದ ಖುಷಿಯಲ್ಲಿದ್ದ ಲಂಕಾ ಆಟಗಾರರು ಶಶಿಕಲಾ ಅವರನ್ನು ಅಪ್ಪಿಕೊಂಡು ಅಭಿನಂದಿಸಿ ಭಾವುಕರಾದರು.
18 ವರ್ಷಕ್ಕೆ ಶ್ರೀಲಂಕಾ ತಂಡದ ಪರ ಪದಾರ್ಪಣೆ ಮಾಡಿದ ಶಶಿಕಲಾ 118 ಏಕದಿನ ಹಾಗೂ 81 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 2029 ರನ್ ಹಾಗೂ 124 ವಿಕೆಟ್, ಟಿ20ಯಲ್ಲಿ 1097 ರನ್ ಹಾಗೂ 77 ವಿಕೆಟ್ ಪಡೆದು ವಿಶ್ವದ ಟಾಪ್ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದರು.
" ಶ್ರೀಲಂಕಾ ತಂಡಕ್ಕೆ ನನ್ನ ಕೊಡುಗೆ ಏನೆಂದು ನನಗೆ ತಿಳಿದಿತ್ತು. ಅದಕ್ಕಾಗಿ ನಾನು ಪಂದ್ಯ ಮುಗಿಯುವವರೆಗೂ ನಿವೃತ್ತಿಯ ವಿಚಾರನ್ನು ನನ್ನೊಳಗೆ ಬಂಧಿಸಿಟ್ಟಿದ್ದೆ. ನಾನು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುವುದನ್ನು ಇಷ್ಟಪಡುತ್ತೇನೆ. ತಂಡಕ್ಕೆ ಗೆಲುವು ತಂದುಕೊಡುವುದೇ ನನ್ನ ಪ್ರಮುಖ ಆಧ್ಯತೆ. ನಾವು ಟೂರ್ನಿಯಲ್ಲಿ ಒಂದಾದರು ಪಂದ್ಯವನ್ನು ಗೆಲ್ಲುತ್ತೇವೆ ಎಂಬುದು ನಮಗೆ ಗೊತ್ತಿತ್ತು. ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ಕೌಶಲ್ಯ ನಮ್ಮಲ್ಲಿ ಇದೆ ಎಂಬುದನ್ನು ನಾವು ಅರಿತೆದ್ದೆವು. ದೇಶಕ್ಕೆ ನೀಡಿರುವ ಕೊಡುಗೆ ನನಗೆ ತೃಪ್ತಿ ತಂದಿದೆ. ಆದರೆ ನನ್ನ ಕುಟುಂಬದ ಜೊತೆ ಕಳೆದಕ್ಕಿಂತ ಹೆಚ್ಚಿನ ದಿನಗಳನ್ನು ಈ ಹುಡುಗಿಯರ ಜೊತೆ ಕಳೆದಿದ್ದೇನೆ. ಮುಂದಿನ ದಿನಗಳಲ್ಲಿ ಇವರನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ಅವರು ಸಿವರ್ದೆನೆ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಇನ್ನು ಸಮಕಾಲಿನರಾದ ಭಾರತದ ಲೆಜೆಂಡ್ ಮಿಥಾಲಿ ರಾಜ್, ಪಾಕಿಸ್ತಾನದ ಸನಾ ಮಿರ್ರನ್ನು ನೆನೆಪಿಸಿಕೊಂಡಿರುವ ಸಿರಿವರ್ದೆನೆ, ನಾವು ಒಟ್ಟಿಗೆ ಸೇರಿದಂತಹ ಸಂದರ್ಭದಲ್ಲಿ ಕ್ರಿಕೆಟ್ ಸಂಬಂಧಪಟ್ಟ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು. ನಾವೆಲ್ಲಾ ಅತ್ಯುತ್ತಮ ಸ್ನೇಹಿತೆಯರಾಗಿದ್ದೆವು. ಇಂತಹ ಸ್ಫೂರ್ತಿ ಕ್ರೀಡೆಯಲ್ಲಿ ಅಗತ್ಯವಾಗಿರುತ್ತದೆ ಎಂದಿದ್ದಾರೆ.
ಇನ್ನು ತಮ್ಮ ಕರೆಯರ್ಗೆ ಬೆಂಬಲವಾಗಿ ಕೊನೆಯವರೆಗೂ ನಿಂತಿದ್ದ ತಮ್ಮ ಪತಿ ಹಾಗೂ ತಂದೆಯನ್ನು ಕೂಡ ಸ್ಮರಿಸಿಕೊಂಡಿದ್ದಾರೆ." 2013 ರಲ್ಲಿ ನಾನು ಮದುವೆಯಾದ ಸಂದರ್ಭದಲ್ಲಿ ಏಷ್ಯಾದ ಇತರೆ ಮಹಿಳೆಯರು ಆಲೋಚಿಸುವಂತೆ ನಾನು ಕ್ರಿಕೆಟ್ ನಿಲ್ಲಿಸಬೇಕೆಂದುಕೊಂಡಿದ್ದೆ. ಆದರೆ ನನ್ನ ಪತಿ, ನೀನೇಕೆ ಕ್ರಿಕೆಟ್ ತ್ಯಜಿಸಲು ಬಯಸುತ್ತೀಯಾ, ನೀನು ಉತ್ತಮ ಕ್ರಿಕೆಟ್ ಆಡುತ್ತಿರುವಾಗ ಏಕೆ ಕ್ರಿಕೆಟ್ ಬಿಡುತ್ತೀಯಾ' ಎಂದು ಕೇಳಿದ್ದರು. ನಾನು ನಿಜಕ್ಕೂ ಆ ಮಾತು ಕೇಳಿ ಆಶ್ಚರ್ಯ ಚಕಿತಳಾಗಿದ್ದೆ. ಎಲ್ಲಾ ಮಹಿಳೆಯರಿಗೂ ಮದುವೆಯಾದ ಮೇಲೆ ದೇಶವನ್ನು ಪ್ರತಿನಿಧಿಸುವ ಅದೃಷ್ಟ ಸಿಗುವುದಿಲ್ಲ. ನನಗೆ ನನ್ನ ಪತಿಯಿಂದ ಆ ಅವಕಾಶ ಸಿಕ್ಕಿತ್ತು" ಎಂದು ತಮ್ಮ ಪತಿಯ ಬಗ್ಗೆ ಗುಣಗಾನ ಮಾಡಿದ್ದಾರೆ.