ವಿಶಾಖಪಟ್ಟಣಂ:ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದು, ಈ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿರುವ ಮೊದಲ ಪ್ಲೇಯರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲೇ ರೋಹಿತ್ ಹೊಸ ದಾಖಲೆ; ಈ ರೆಕಾರ್ಡ್ ಬರೆದ ಮೊದಲ ಆಟಗಾರ!
ಟೀಂ ಇಂಡಿಯಾ ಕ್ರಿಕೆಟ್ನ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮೂರು ಮಾದರಿಯಲ್ಲೂ ವಿಶೇಷ ದಾಖಲೆ ನಿರ್ಮಿಸಿದ್ದು ಮಾಡಿದ್ದು, ಈ ರೆಕಾರ್ಡ್ ಬರೆದ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.
174 ಎಸೆತಗಳಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್ ಸೇರಿದಂತೆ 115 ರನ್ ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿರುವ ರೋಹಿತ್ ಶರ್ಮಾ, ಆರಂಭಿಕನಾಗಿ ಮೂರು ಮಾದರಿ ಕ್ರಿಕೆಟ್ನಲ್ಲೂ ಶತಕ ಸಿಡಿಸಿರುವ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿ ಎಲ್ಲರಿಂದಲೂ ಟೀಕೆಗೊಳಗಾಗಿದ್ದ ರೋಹಿತ್ ಇದೀಗ ಅದ್ಭುತ ಪ್ರದರ್ಶನ ನೀಡಿದ್ದಾರೆ. 32 ವರ್ಷದ ಹಿಟ್ಮ್ಯಾನ್ ಖ್ಯಾತಿಯ ಶರ್ಮಾ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೂರು ಮಾದರಿ ಕ್ರಿಕೆಟ್ನಲ್ಲಿ ಶತಕ ಸಿಡಿಸಿರುವ ಮೊದಲ ಆಟಗಾರನಾಗಿದ್ದು, ಈಗಾಗಲೇ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್, ನ್ಯೂಜಿಲ್ಯಾಂಡ್ನ ಮಾಜಿ ಬ್ಯಾಟ್ಸ್‌ಮನ್ ಮೆಕಲಂ, ಮಾರ್ಟಿನ್ ಗಪ್ಟಿಲ್, ಶ್ರೀಲಂಕಾದ ತಿಲಕರತ್ನ ದಿಲ್ಶನ್, ಪಾಕಿಸ್ತಾನದ ಅಹ್ಮದ್ ಶೆಹಜಾದ್, ಆಸ್ಟ್ರೇಲಿಯಾದ ಶೇನ್ ವಾಟ್ಸನ್ ಹಾಗೂ ಬಾಂಗ್ಲಾದೇಶದ ತಮೀಮ್ ಇಕ್ಬಾಲ್ ಈ ದಾಖಲೆ ನಿರ್ಮಿಸಿದ್ದಾರೆ.
ಇದರ ಜತೆಗೆ ಟೀಂ ಇಂಡಿಯಾ ಪರ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ ಪಂದ್ಯದಲ್ಲಿ ಶತಕ ಸಿಡಿಸಿರುವ 4ನೇ ಪ್ಲೇಯರ್ ಆಗಿದ್ದು, ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ 187 ರನ್, ಕೆಎಲ್ ರಾಹುಲ್ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ 110 ರನ್, ವೆಸ್ಟ್ ಇಂಡೀಸ್ ವಿರುದ್ಧ ಪೃಥ್ವಿ ಶಾ 2018ರಲ್ಲಿ 134 ರನ್ ಗಳಿಕೆ ಮಾಡಿದ್ದಾರೆ.