ಮುಂಬೈ: ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಅವಕಾಶ ವಂಚಿತರಾದ ನಿರಾಸೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದ ಟೀಂ ಇಂಡಿಯಾ ಆಟಗಾರ ಅಂಬಾಟಿ ರಾಯುಡು ಕಳೆದ ಕೆಲ ದಿನಗಳ ಹಿಂದೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಇದೀಗ ಅವರನ್ನು ಮುಂಬರುವ ವಿಜಯ್ ಹಜಾರೆ ಟ್ರೋಫಿ ಹಿನ್ನೆಲೆಯಲ್ಲಿ ಹೈದರಾಬಾದ್ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ.
ಕಳೆದ ವಿಶ್ವಕಪ್ನಲ್ಲಿ ಇವರ ಜಾಗಕ್ಕೆ ಆಲ್ರೌಂಡರ್ ವಿಜಯ್ ಶಂಕರ್ ತದನಂತರ ರಿಷಭ್ ಪಂತ್ ಆಯ್ಕೆಯಾಗಿದ್ದರು. ಆಯ್ಕೆ ಸಮಿತಿ ನಿರ್ಧಾರದಿಂದ ಬೇಸತ್ತು ವೃತ್ತಿ ಬದುಕಿಗೆ ರಾಯುಡು ವಿದಾಯ ಘೋಷಣೆ ಮಾಡಿದ್ದರು. ಇದಾದ ಬಳಿಕ ತಮ್ಮ ತಪ್ಪಿನ ಅರಿವಾಗಿ ನಿವೃತ್ತಿ ವಾಪಸ್ ಪಡೆದುಕೊಂಡಿದ್ದಾಗಿ ಹೇಳಿಕೆ ನೀಡಿದ್ದರು.
ನಿವೃತ್ತಿ ಘೋಷಣೆ ಹೇಳಿಕೆ ಹಿಂಪಡೆದುಕೊಳ್ಳುವಂತೆ ಮಾಡಲು ಹೈದರಾಬಾದ್ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ನೋಯೆಲ್ ಡೇವಿಡ್ ಹಾಗೂ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಮಹತ್ವದ ಪಾತ್ರ ನಿರ್ವಹಿಸಿದ್ದರು.