ಹೈದರಾಬಾದ್:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ರನ್ನು ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ಉಪ ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು, ಹೊಸ ಸವಾಲಿಗೆ ಸಿದ್ಧವಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಟೀಂ ಇಂಡಿಯಾ ಸೆಲೆಕ್ಟರ್‌ಗಳು ಸೋಮವಾರ ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ-20 ಮತ್ತು ಟೆಸ್ಟ್ ತಂಡಗಳನ್ನು ಘೋಷಿಸಿದ್ದು, ರಾಹುಲ್ಗೆ ಉಪ ನಾಯಕ ಪಟ್ಟ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್, 'ಜವಾಬ್ದಾರಿ ಮತ್ತು ಸವಾಲಿಗೆ ಸಿದ್ಧನಾಗಿದ್ದೇನೆ' ಎಂದು ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ರಾಹುಲ್, "ಇದು ತುಂಬಾ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ. ನಾನು ಅದನ್ನು ನಿರೀಕ್ಷಿಸುತ್ತಿರಲಿಲ್ಲ. ನೂತನ ಜವಾಬ್ದಾರಿ ಮತ್ತು ಸವಾಲಿಗೆ ಸಿದ್ಧನಿದ್ದೇನೆ, ನನ್ನ ತಂಡಕ್ಕೆ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.
ಸದ್ಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕೆ.ಎಲ್.ರಾಹುಲ್ ಅತಿ ಹೆಚ್ಚು ಸ್ಕೋರ್ ಗಳಿಸಿದ್ದಾರೆ. ಕ್ರಿಸ್ ಗೇಲ್ ಅಗಮಿಸಿದಾಗಿನಿಂದ ಪಂಜಾಬ್ ತಂಡ ಒಂದು ಪಂದ್ಯವನ್ನೂ ಸೋತಿಲ್ಲ. ಇಲ್ಲಿಯವರೆಗೆ ಸತತ ಐದು ಪಂದ್ಯಗಳನ್ನು ಗೆದ್ದಿರುವ ಪಂಜಾಬ್ ಇಂದು ರಾಜಸ್ಥಾನ ತಂಡವನ್ನು ಎದುರಿಸಲಿದ್ದು, ನಾಕೌಟ್ ಹಂತಕ್ಕೇರುವ ಭರವಸೆಯಲ್ಲಿದೆ.