ಚತ್ತೋಗ್ರಾಮ್(ಬಾಂಗ್ಲಾದೇಶ): ವಿಶ್ವಕಪ್ ಟೂರ್ನಿಯ ಹೀನಾಯ ಪ್ರದರ್ಶನದ ಬಳಿಕ ಗುಲ್ಬಾಡಿನ್ ನೈಬ್ ಅವರನ್ನು ನಾಯಕತ್ವ ಪಟ್ಟದಿಂದ ಕೆಳಗಿಳಿಸಿ ಯುವ ಪ್ರತಿಭೆ ರಶೀದ್ ಖಾನ್ಗೆ ತಂಡದ ಸಾರಥ್ಯ ವಹಿಸಲಾಗಿತ್ತು. ನಾಯಕತ್ವ ವಹಿಸಿದ ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಆಲ್ರೌಂಡರ್ ರಶೀದ್ ಖಾನ್ ತಂಡದ ಹೊಸ ಆಶಾಕಿರಣವಾಗಿ ಕಾಣಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ನಾಯಕ ರಶೀದ್ ಖಾನ್ ಅದ್ಭುತ ಪ್ರದರ್ಶನ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ನಾಯಕತ್ವ ವಹಿಸಿದ ಚೊಚ್ಚಲ ಮ್ಯಾಚ್ನಲ್ಲೇ ಐದು ವಿಕೆಟ್ ಹಾಗೂ 50ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ 342 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದರಲ್ಲಿ ನಾಯಕ ರಶೀದ್ ಖಾನ್ ಪಾಲು 51 ರನ್ ಗಳಿಸಿದ್ದಾರೆ. ಇನ್ನು ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಅನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ರಶೀದ್ ಬಹುಮುಖ್ಯ ಪಾತ್ರ ವಹಿಸಿದ್ದರು. 55 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.
ರಶೀದ್ ಖಾನ್ ಇದೇ ವೇಳೆ ಮತ್ತೊಂದು ದಾಖಲೆಗೂ ಭಾಜನರಾಗಿದ್ದಾರೆ. ಒಂದೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಹಾಗೂ 50+ ರನ್ ಗಳಿಸಿದ ವಿಶ್ವದ ಕಿರಿಯ ನಾಯಕ ಎನ್ನುವ ದಾಖಲೆಯನ್ನು ರಶೀದ್ ಖಾನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಬಾಂಗ್ಲಾದ ಶಕೀಬ್ ಅಲ್ ಹಸನ್ ಹೆಸರಲ್ಲಿತ್ತು. ರಶೀದ್ ಖಾನ್ ದಾಖಲೆ 20 ವರ್ಷ 352 ದಿನದಲ್ಲಿ ದಾಖಲಾದರೆ, ಶಕೀಬ್ ಇದೇ ದಾಖಲೆಯನ್ನು 22 ವರ್ಷ 115 ದಿನದಲ್ಲಿ ಮಾಡಿದ್ದರು.
ನಾಯಕತ್ವ ವಹಿಸಿದ ಚೊಚ್ಚಲ ಪಂದ್ಯದಲ್ಲಿ 5 ವಿಕೆಟ್ ಹಾಗೂ 50+ ರನ್:
- ಶೆಲ್ಡನ್ ಜಾಕ್ಸನ್(ಇಂಗ್ಲೆಂಡ್) -1905
- ಇಮ್ರಾನ್ ಖಾನ್(ಪಾಕಿಸ್ತಾನ) - 1982
- ಶಕೀಬ್ ಅಲ್ ಹಸನ್(ಬಾಂಗ್ಲಾದೇಶ) - 2009
- ರಶೀದ್ ಖಾನ್(ಅಫ್ಘಾನಿಸ್ತಾನ) - 2019