ಮುಂಬೈ: ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯದ ವೇಳೆ ಮೈದಾನದಕ್ಕೆ ಎರಡು ಹಾವು ನುಗ್ಗಿ ಪಂದ್ಯ ಸ್ಥಗಿತಗೊಳ್ಳುವಂತೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಳೆಯಿಂದ, ಫ್ಲಡ್ಲೈಟ್ ಕೈಕೊಡುವುದರಿಂದ ಅಥವಾ ಮಂದ ಬೆಳಕಿನ ಕಾರಣದಿಂದ ಪಂದ್ಯಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವಂತಹ ಘಟನೆ ತುಂಬಾ ನಡೆದಿವೆ. ಆದರೆ ಮೈದಾನಕ್ಕೆ ಹಾವುಗಳು ನುಗ್ಗಿ ಪಂದ್ಯವನ್ನು ನಿಲ್ಲಿಸಿದ ಘಟನೆ ಕರ್ನಾಟಕ ಹಾಗೂ ಮುಂಬೈ ನಡುವೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆದ ರಣಜಿ ಪಂದ್ಯದಲ್ಲಿ ನಡೆದಿದೆ.
ಎರಡು ಹಾವುಗಳು ಮೈದಾನಕ್ಕೆ ನುಗ್ಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮೈದಾನದ ಸಿಬ್ಬಂದಿ ಹಾವುಗಳನ್ನು ಹಿಡಿದು ಮೈದಾನದಿಂದ ಕೊಂಡೊಯ್ದಿದ್ದಾರೆ. ಈ ರೀತಿ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಡಿಸೆಂಬರ್ 9ರಂದು ನಡೆದಿದ್ದ ವಿದರ್ಭ ಹಾಗೂ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲೂ ಹಾವೊಂದು ಮೈದಾನ ಪ್ರವೇಶಿಸಿ ಆಟವನ್ನು ಸ್ಥಗಿತಗೊಳಿಸಿತ್ತು.
ಇನ್ನು ಈ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್ಗಳಿಂದ ಮುಂಬೈ ತಂಡವನ್ನು ಮಣಿಸಿತು. ಮುಂಬೈ ತಂಡದಲ್ಲಿ ಘಟಾನುಘಟಿಗಳಿದ್ದರೂ ತವರಿನಲ್ಲೇ ಸತತ ಎರಡು ಪಂದ್ಯದಲ್ಲಿ ಸೋಲನುಭವಿಸಿತು.