ನವದೆಹಲಿ: 2007ರ ವಿಶ್ವಕಪ್ನಲ್ಲಿ ಭಾರತದ ತಂಡದ ವಿರುದ್ಧ ಬಾಂಗ್ಲಾ ಗೆಲ್ಲಲು ನೆರವಾಗಿದ್ದ ನನ್ನ ಅರ್ಧಶತಕದಾಟವೇ ನನ್ನ ವೃತ್ತಿ ಜೀವನದ ಅತಿದೊಡ್ಡ ಇನ್ನಿಂಗ್ಸ್ ಎಂದು ಬಾಂಗ್ಲಾ ವಿಕೆಟ್ ಕೀಪರ್ ರಹೀಮ್ ಹೇಳಿಕೆ ನೀಡುವ ಮೂಲಕ ಭಾರತೀಯ ಅಭಿಮಾನಿಗಳಿಗೆ 13 ವರ್ಷಗಳ ಹಿಂದಿನ ಕಹಿ ಘಟನೆ ನೆನಪಿಸಿದ್ದಾರೆ.
2003ರ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದ ಭಾರತ ತಂಡ 2007ರ ವಿಶ್ವಕಪ್ನಲ್ಲಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿದಿತ್ತು. ಆದರೆ ಆ ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಬಾಂಗ್ಲಾದೇಶವನ್ನು ಕಡೆಗಣಿಸಿದ್ದಕ್ಕೆ ಸರಿಯಾದ ಬೆಲೆಯನ್ನೇ ತೆತ್ತಿತ್ತು. ಬಾಂಗ್ಲಾ ವಿರುದ್ಧ ಸೋಲು ಕಂಡು ಲೀಗ್ನಲ್ಲೆ ಹೊರಬಿದ್ದು ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿತ್ತು.
ಇಎಸ್ಪಿಎನ್ ಕ್ರಿಕೆಟ್ ಇನ್ಫೋ ಜೊತೆ ತಮ್ಮ ವೃತ್ತಿ ಜೀವನದ ಮಧುರ ಕ್ಷಣಗಳನ್ನು ಹಂಚಿಕೊಂಡಿರುವ ಮುಶ್ಫೀಕರ್ ರಹೀಮ್, 2007ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮಣಿಸಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತ ನಮ್ಮ ತಂಡವನ್ನು ಲಘುವಾಗಿ ಪರಿಗಣಿಸಿತ್ತು. ನಮ್ಮ ವಿರುದ್ಧದ ಪಂದ್ಯವನ್ನು ಬ್ಯಾಟಿಂಗ್ ಅಭ್ಯಾಸದಂತೆ ಕಂಡಿದ್ದ ಭಾರತ ತಂಡವನ್ನು ಬಗ್ಗು ಬಡಿದಿದ್ದೆವು. ಆ ಪಂದ್ಯದಲ್ಲಿ ನಾನು ಅರ್ಧಶತಕ ಸಿಡಿಸಿದ್ದೆ. ಕಾಯಂ ಸ್ಥಾನಕ್ಕಾಗಿ ಹೋರಾಡುತ್ತಿದ್ದ ಆ ಪಂದ್ಯ ನನ್ನ ವೃತ್ತಿ ಜೀವನವನ್ನೇ ಬದಲಿಸಿತ್ತು ಎಂದು ರಹೀಮ್ ಹೇಳಿಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಬಾಂಗ್ಲಾ ದಾಳಿಗೆ ತತ್ತರಿಸಿ 191 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ ತಂಡ 48.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಇತಿಹಾಸ ನಿರ್ಮಿಸಿತ್ತು. ರಹೀಮ್(56), ತಮೀಮ್ ಇಕ್ಬಾಲ್ (51) ಹಾಗೂ ಶಕಿಬ್ ಅಲ್ ಹಸನ್ (53) ಅರ್ಧಶತಕ ಸಿಡಿಸಿದ್ದರು.
"ನಾನು ವಿನ್ನಿಂಗ್ ಶಾಟ್ ಹೊಡೆದಾಗ ಅಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಾಗಲಿಲ್ಲ. ಈ ಸಂದರ್ಭದಲ್ಲಿ ನನಗೆ ಅವಕಾಶ ಕೊಟ್ಟ ನಾಯಕ ಆಶ್ರಫುಲ್ಗೆ ಧನ್ಯವಾದ ಅರ್ಪಿಸುತ್ತೇನೆ. ಏಕೆಂದರೆ ಹಿಂದಿನ ಓವರ್ನಲ್ಲಿ ಜಹೀರ್ ಖಾನ್ ಬೌಲಿಂಗ್ನಲ್ಲಿ ವಿನ್ನಿಂಗ್ ರನ್ ಗಳಿಸುವ ಅವಕಾಶ ಸಿಕ್ಕಿತ್ತು. ಆ ಪಂದ್ಯದ ಬಳಿಕ ನನಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿತ್ತು. ನಮ್ಮ ದೇಶಕ್ಕಾಗಿ ಏನೋ ದೊಡ್ಡದಾಗಿ ಸಾಧಿಸಿದ್ದೇವೆ ಎಂಬ ಭಾವನೆ ನಮ್ಮದಾಗಿತ್ತು" ಎಂದು ರಹೀಮ್ ಹೇಳಿಕೊಂಡಿದ್ದಾರೆ.