ರಾಜ್ಕೋಟ್: ಸೌರಾಷ್ಟ್ರ ವಿರುದ್ಧ ಫಾಲೋಆನ್ಗೆ ತುತ್ತಾಗಿದ್ದ ಕರ್ನಾಟಕ ತಂಡ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಹಾಗೂ ಆರ್ ಸಮರ್ಥ್ ಅವರ ಸಮಯೋಜಿತ ಬ್ಯಾಟಿಂಗ್ ನೆರವಿನಿಂದ ಸೋಲುತಪ್ಪಿಕೊಂಡಿದೆ.
410 ರನ್ಗಳ ಬೃಹತ್ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ್ದ ಕರ್ನಾಟಕ ತಂಡ ಕೊನೆಯ ದಿನ ಯಶಸ್ವಿ ಬ್ಯಾಟಿಂಗ್ ನಡೆಸುವ ಮೂಲಕ ಇನ್ನಿಂಗ್ಸ್ ಸೋಲಿನಿಂದ ಪಾರಾಗಿದೆ.
ಮೂರನೇ ದಿನ ವಿಕೆಟ್ ನಷ್ಟವಿಲ್ಲದೆ 30 ರನ್ಗಳಸಿದ್ದ ಕರ್ನಾಟಕ ತಂಡ ಕೊನೆಯ ದಿನ 4 ಕಳೆದುಕೊಂಡು 22 ರನ್ಗಳಿಸಿ ಡ್ರಾ ಸಾಧಿಸಿತು. ಆರಂಭಿಕ ಬ್ಯಾಟ್ಸ್ಮನ್ ರೋಹನ್ ಕಡಮ್ 132 ಎಸೆತಗಳಲ್ಲಿ 42 ರನ್, ಸಮರ್ಥ್ 159 ಎಸೆತಗಳಲ್ಲಿ74 ರನ್ಗಳಿಸಿ ಔಟಾದರು.
ಸಮರ್ಥ್ ಔಟಾದ ನಂತರ ಜವಾಬ್ದಾರಿಯುವ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ ಬರೋಬ್ಬರಿ 133 ಎಸೆತಗಳೆನ್ನೆದುರಿಸಿ 53 ರನ್ ಸಿಡಿಸಿ ಔಟಾಗದೆ ಉಳಿದರು. ಪಡಿಕ್ಕಲ್ಗೆ ಸಾಥ್ ನೀಡಿದ ನಾಯಕ ಶ್ರೇಯಸ್ ಗೋಪಾಲ್ 55 ಎಸೆತಗಳಲ್ಲಿ 13 ರನ್ಗಳಿಸಿ ಪಂದ್ಯ ಡ್ರಾಗೊಳ್ಳುವಂತೆ ಮಾಡಿದರು. ಕೆ ಸಿದ್ದಾರ್ಥ್ 12, ಪವನ್ ದೇಶಪಾಂಡೆ 12 ರನ್ಗೆ ವಿಕೆಟ್ ಒಪ್ಪಿಸಿದ್ದರು.
ಸೌರಾಷ್ಟ್ರ ಪರ ದರ್ಮೇಂದ್ರ ಸಿನ್ಹ ಜಡೇಜಾ 2, ಉನಾದ್ಕಟ್ ಹಾಗೂ ಕಮಲೇಶ್ ಮಕ್ವಾನ ತಲಾ ಒಂದು ವಿಕೆಟ್ ಪಡೆದರು.
ಇನ್ನು ಸೌರಾಷ್ಟ್ರ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಪೂಜಾರ(248) ಅವರ ದ್ವಿಶತಕ ಹಾಗೂ ಶೆಲ್ಡಾನ್ ಜಾಕ್ಸನ್(161) ಶತಕದ ನೆರವಿನಿಂದ 582 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಕರ್ನಾಟಕ ತಂಡ ಕೇವಲ 171 ರನ್ಗಳಿಗೆ ಆಲೌಟ್ ಆಗಿತ್ತು.
ಪಂದ್ಯ ಡ್ರಾನಲ್ಲಿ ಆಂತ್ಯವಾದ್ದರಿಂದ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಸೌರಾಷ್ಟ್ರ 3 ಅಂಕ ಪಡೆದರೆ, ಕರ್ನಾಟಕ 1 ಅಂಕ ಪಡೆಯಿತು. ಅಲ್ಲದೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.