ಲಂಡನ್:ಐಸಿಸಿ ದಶಕದ ಟಿ20, ಏಕದಿನ ಮತ್ತು ಟೆಸ್ಟ್ ತಂಡವನ್ನು ಪ್ರಕಟಿಸಿದ್ದು, ಮಹಿಳೆಯರ ಮತ್ತು ಪುರುಷರ ತಂಡಗಳಲ್ಲಿ ಪಾಕಿಸ್ತಾನ ಕ್ರಿಕೆಟ್ನ ಯಾವೊಬ್ಬ ಆಟಗಾರನೂ ಕಾಣಿಸಿಕೊಂಡಿಲ್ಲ.
ಐಸಿಸಿ ಘೋಷಿಸಿದ ಏಕದಿನ ತಂಡದಲ್ಲಿ ಮೂವರು ಭಾರತೀಯರು, ಇಬ್ಬರು ಆಸ್ಟ್ರೇಲಿಯನ್ನರು, ದಕ್ಷಿಣ ಆಫ್ರಿಕಾದ ಇಬ್ಬರು ಹಾಗೂ ಆಫ್ರಿಕಾ, ಇಂಗ್ಲೆಂಡ್, ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ತಲಾ ಒಬ್ಬ ಆಟಗಾರರಿದ್ದಾರೆ.
ಟೆಸ್ಟ್ ತಂಡದಲ್ಲಿ ಇಂಗ್ಲೆಂಡ್ನ ನಾಲ್ವರು, ಭಾರತದ ಇಬ್ಬರು, ಆಸ್ಟ್ರೇಲಿಯಾದ ಇಬ್ಬರು, ಶ್ರೀಲಂಕಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾದಿಂದ ತಲಾ ಒಬ್ಬರನ್ನು ಆಯ್ಕೆ ಮಾಡಿದೆ.
ಟಿ20 ತಂಡದಲ್ಲಿ ಭಾರತ ತಂಡದ ನಾಲ್ವರು, ವೆಸ್ಟ್ ಇಂಡೀಸ್ ತಂಡದ ಇಬ್ಬರು, ಆಸ್ಟ್ರೇಲಿಯಾದ ಇಬ್ಬರು ಹಾಗೂ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾದ ತಲಾ ಒಬ್ಬ ಆಟಗಾರರು ಆಯ್ಕೆಯಾಗಿದ್ದಾರೆ.
ಟಿ20 ತಂಡದಲ್ಲಿ ಕೇವಲ ಮೂರು ಬೌಲರ್ಗಳನ್ನು ಮಾತ್ರ ತಂಡಕ್ಕೆ ಸೇರಿಸಲಾಗಿದೆ. ಇದರ ಜೊತೆಗೆ ಪಾಕಿಸ್ತಾನದ ಟಿ20 ಕ್ರಿಕೆಟ್ನ ಸ್ಪಿನ್ನರ್ಗಳಾದ ಶಾಹೀದ್ ಅಫ್ರಿದಿ, ಸಯೀದ್ ಅಜ್ಮಲ್ ಹಾಗೂ ವೇಗಿ ಉಮರ್ ಗುಲ್ ಅವರನ್ನು ತಂಡದಲ್ಲಿ ಪರಿಗಣಿಸದೆ ಅಫ್ಘಾನಿಸ್ತಾನದ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಪಾಕಿಸ್ತಾನ ಸೇರಿದಂತೆ ಹಲವು ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಖೇದ ವ್ಯಕ್ತಪಡಿಸಿದ್ದು, ಐಸಿಸಿ ದಶಕದ ತಂಡ ಎಂದು ಟೈಪಿಂಗ್ ತಪ್ಪಿನಿಂದ ಬರೆದಿದೆ. ಅದು ದಶಕದ ಐಪಿಎಲ್ ತಂಡ ಎಂದಾಗಬೇಕು ಎಂದು ಐಸಿಸಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಭಾರತ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಕೂಡ ಐಸಿಸಿ ಟಿ20 ತಂಡದಲ್ಲಿ ಕೇವಲ 3 ಬೌಲರ್ಗಳನ್ನು ಆಯ್ಕೆ ಮಾಡಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದ್ದಾರೆ.