ನವದೆಹಲಿ: ವಿಶ್ವಕಪ್ನಲ್ಲಿ ಮೂರು ಬಾರಿ ಅವಕಾಶ ವಂಚಿತನಾದ ಬೇಸರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ ರಾಯುಡು ನಿರ್ಧಾರದ ಹಿಂದೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಕೈವಾಡವಿದೆ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದಾರೆ.
2015ರ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಅವಕಾಶ ವಂಚಿತರಾದ ನಂತರ ನಿರಂತರವಾಗಿ ಧೋನಿಯ ಮೇಲೆ ಕೆಂಡಕಾರುತ್ತಾ ಬರುತ್ತಿರುವ ಯೋಗರಾಜ್, ತಮ್ಮ ಮಗ ನಿವೃತ್ತಿಯಾಗುತ್ತಿದ್ದಂತೆ ಮತ್ತೆ ಧೋನಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಕಳೆದ ವಾರವಷ್ಟೇ ನಿವೃತ್ತಿ ಘೋಷಿಸಿದ ರಾಯುಡುರನ್ನು ತಂಡದಿಂದ ಆಯ್ಕೆಯಾಗದಂತೆ ಮಾಡಿದ್ದು ಕೂಡ ಧೋನಿ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
ಅಲ್ಲದೆ ರಾಯುಡು ಕುರಿತು ಮಾತನಾಡಿದ್ದು, ಆತ ಇನ್ನಷ್ಟು ವರ್ಷ ಕ್ರಿಕೆಟ್ ಆಡಬೇಕು. ರಣಜಿ ಟ್ರೋಫಿ, ಇರಾನಿ ಟ್ರೋಫಿ, ದುಲೀಪ್ ಟ್ರೋಫಿಯಲ್ಲಿ 100, 200, 300 ರನ್ ಔಟಾಗದೆ ಗಳಿಸಬೇಕು. ಅತನ ಬಳಿ ಕ್ರಿಕೆಟ್ ಆಡುವ ಶಕ್ತಿ ಇನ್ನೂ ಇದೆ ಎಂದು ಯೋಗರಾಜ್ ಹೇಳಿದ್ದಾರೆ.
ರಾಯುಡು ನನ್ನ ಮಗನ ಹಾಗೆ. ನೀನು ಆತುರದ ನಿರ್ಧಾರ ತೆಗೆದುಕೊಂಡು ತಪ್ಪು ಮಾಡಿದ್ದೀಯಾ. ನಿವೃತ್ತಿಯನ್ನು ವಾಪಸ್ ತೆಗೆದುಕೋ. ನಿನ್ನ ಶಕ್ತಿಯನ್ನು ನಿನ್ನನ್ನು ಕಡೆಗಣಿಸಿದವರಿಗೆ ತೋರಿಸು ಎಂದು 61 ವರ್ಷದ ಯೋಗರಾಜ್ ಸಲಹೆ ನೀಡಿದ್ದಾರೆ.
ಇದರ ಜೊತೆಗೆ ಧೋನಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಎಂ.ಎಸ್.ಧೋನಿಯಂತಹ ಜನರು ಶಾಶ್ವತವಾಗಿ ಉಳಿಯುವುದಿಲ್ಲ. ಈ ರೀತಿಯ ಹೊಲಸು ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಧೋನಿ ಮೇಲೆ ವಿನಾ ಕಾರಣ ಆರೋಪ ಮಾಡುತ್ತಿರುವ ಯೋಗರಾಜ್ ವಿರುದ್ಧ ದೋನಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಸುಖಾಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.