ಲಂಡನ್: ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ಗೆ ಬದಲಿಗೆ ಆಟಗಾರನಾಗಿ ಮಾರ್ನಸ್ ಲಾಬುಶೇನ್ಗೆ ಬ್ಯಾಟಿಂಗ್ ಆಡುವ ಅವಕಾಶ ನೀಡಲಾಗಿದೆ.
ಶನಿವಾರ ಸ್ಮಿತ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಕುತ್ತಿಗೆಗೆ ಬಲವಾದ ಪೆಟ್ಟು ತಿಂದಿದ್ದರು. ಇದರಿಂದ ಮೈದಾನ ತೊರೆದಿದ್ದ ಅವರು ಹಲವಾರು ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ಮತ್ತೆ ಬ್ಯಾಟಿಂಗ್ ನಡೆಸಿದ್ದರು.
ಆದರೆ, ಕೊನೆಯ ದಿನವಾದ ಇಂದು ಗಾಯದ ನೋವು ಹೆಚ್ಚಾದ ಕಾರಣ ಮೈದಾನಕ್ಕಿಳಿದಿರಲಿಲ್ಲ. ಹೀಗಾಗಿ ಅವರ ಬದಲು ಮಾರ್ನಸ್ ಲಾಬುಶೇನ್ ಫೀಲ್ಡಿಂಗ್ ಮಾಡಿದರು. ನಂತರ ಅವರನ್ನು ಕನ್ಕ್ಯುಶನ್ ಸಬ್ಸ್ಟಿಟ್ಯೂಟ್(ಗಂಭೀರ ಗಾಯಗೊಂಡ ಆಟಗಾರನ ಬದಲಿ ಆಟಗಾರ) ಆಗಿ ಘೋಷಿಸಿಲಾಯಿತು. ಹಾಗಾಗಿ ಸ್ಮಿತ್ ಬದಲಿಗೆ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವ ಅವಕಾಶವನ್ನು ಕಲ್ಪಿಸಲಾಯಿತು.
ಪಂದ್ಯದ ನಡುವೆ ಆಟಗಾರ ಕುತ್ತಿಗೆ ಅಥವಾ ತಲೆಗೆ ಗಂಭೀರ ಗಾಯವಾದರೆ ವೈದ್ಯಕೀಯ ಪರೀಕ್ಷಕ ದೃಢಪಡಿಸಿದ ಮೇಲೆ ಮ್ಯಾಚ್ ರೆಫ್ರಿ ಒಪ್ಪಿಗೆ ಪಡೆದು ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಟಗಾರನನ್ನು ತಂಡಕ್ಕೆ ಸೇರ್ಪಡಿಸಿಕೊಳ್ಳಬಹುದು. ಈತನಿಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ನಡೆಸಲು ಅನುಮತಿ ನೀಡಲಾಗುತ್ತದೆ.
ಈ ನಿಯಮವನ್ನು ಪ್ರಾಯೋಗಿಕವಾಗಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅಳವಡಿಸಿಕೊಳ್ಳಲು ಐಸಿಸಿ ಒಪ್ಪಿಗೆ ಸೂಚಿಸಿತ್ತು. 2 ವರ್ಷಗಳ ನಂತರ ಇದೀಗ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಐಸಿಸಿಯ ನಿಯಮದಂತೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ನೇಮಿಸಿಕೊಳ್ಳಲಾಗಿದೆ. ಮಾರ್ನಸ್ ಲಾಬುಶೇನ್ ವಿಶ್ವದ ಮೊದಲ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್(ಗಂಭೀರ ಗಾಯಗೊಂಡ ಆಟಗಾರನ ಬದಲಿ ಆಟಗಾರ) ಎಂದೆನಿಸಿಕೊಂಡರು.