ದುಬೈ:ಟಿ20 ಕ್ರಿಕೆಟ್ ಹಾಗೂ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲೇ ಎರಡು ಸೂಪರ್ ಓವರ್ ನಡೆದಿದ್ದು, ಐತಿಹಾಸಿಕ ಪಂದ್ಯದಲ್ಲಿ ವಿಜಯಲಕ್ಷ್ಮಿ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾಗಿದೆ.
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾಲಿ ಚಾಂಪಿಯನ್ ಮುಂಬೈ ಡಿಕಾಕ್ ಅರ್ಧಶತಕದ ನೆರವಿನಿಂದ 176ರನ್ಗಳಿಸಿತ್ತು. ಈ ಮೊತ್ತದವನ್ನು ಬೆನ್ನತ್ತಿದ ಪಂಜಾಬ್ ಕೆಎಲ್ ರಾಹುಲ್(77) ಅರ್ಧಶತಕದ ಹೊರೆತಾಗಿಯೂ 20 ಓವರ್ಗಳಲ್ಲಿ 176 ರನ್ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.
ಪಂದ್ಯದ ಫಲಿತಾಂಶಕ್ಕಾಗಿ ನಡೆದ ಸೂಪರ್ ಓವರ್ನಲ್ಲಿ ಮೊಲದು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಬುಮ್ರಾ ಬೌಲಿಂಗ್ನಲ್ಲಿ 1 ವಿಕೆಟ್ ಕಳೆದುಕೊಂಡು 5 ರನ್ಗಳಿಸಿತು. ಇದಕ್ಕುತ್ತರವಾಗಿ ಮೊಹಮ್ಮದ್ ಶಮಿ ಎಸೆದ ಸೂಪರ್ ಓವರ್ನಲ್ಲಿ ರೋಹಿತ್ ಶರ್ಮಾ ಹಾಗೂ ಡಿಕಾಕ್ 5 ರನ್ಗಳಿಸಲಷ್ಟೇ ಶಕ್ತವಾಗಿ ಸೂಪರ್ ಓವರ್ ಕೂಡ ಟೈ ಮಾಡಿಕೊಂಡರು.
ವಿಜೇತರನ್ನು ಘೋಷಿಸಲು 2ನೇ ಸೂಪರ್ ಓವರ್ ನಡೆಸಲಾಯಿತು. ನಿಯಮದ ಪ್ರಕಾರ ಸೂಪರ್ ಓವರ್ನಲ್ಲಿ ಪಾಲ್ಗೊಂಡ ಆಟಗಾರರು ಮತ್ತೊಂದು ಸೂಪರ್ನಲ್ಲಿ ಆಡುವಂತಿರಲಿಲ್ಲ. ಹಾಗಾಗಿ ಮುಂಬೈ ತಂಡದಿಂದ ಹಾರ್ದಿಕ್ ಹಾಗೂ ಪೊಲಾರ್ಡ್, ಕ್ರಿಸ್ ಜೋರ್ಡಾನ್ ಎಸೆದ 2ನೇ ಸೂಪರ್ ಓವರ್ನಲ್ಲಿ 11 ರನ್ಗಳಿಸಿದರು.
12 ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ತಂಡದ ಗೇಲ್ ಮತ್ತು ಮಯಾಂಕ್ ಅಗರ್ವಾಲ್ ಕೇವಲ ನಾಲ್ಕೇ ಎಸೆತಗಳಲ್ಲಿ 15 ರನ್ ಸಿಡಿಸಿ ಗೆಲುವು ತಂದುಕೊಟ್ಟರು. ಬೌಲ್ಟ್ ಎಸೆದ ಮೊದಲ ಎಸೆತದಲ್ಲಿ ಕ್ರಿಸ್ಗೇಲ್ ಸಿಕ್ಸರ್ ಸಿಡಿಸಿದರೆ, 3 ಮತ್ತು 4ನೇ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಸತತ 2 ಬೌಂಡರಿ ಬಾರಿಸುವ ಮೂಲಕ ಐತಿಹಾಸಿಕ ಪಂದ್ಯದಲ್ಲಿ ಪಂಜಾಬ್ಗೆ ಗೆಲುವು ತಂದುಕೊಟ್ಟರು.
ಕ್ರಿಕೆಟ್ ಚರಿತ್ರೆಯಲ್ಲಿ ಸೂಪರ್ ಕೂಡ ಟೈ ಆಗಿದ್ದು ಇದು 3ನೇ ಬಾರಿ. ಮೊದಲ ಬಾರಿ 2014ರಲ್ಲಿ ಕೆಕೆಆರ್ ಮತ್ತು ರಾಜಸ್ಥಾನ್ ನಡುವೆ, 2019 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆದಿತ್ತು. ಆದರೆ ಆ ಪಂದ್ಯಗಳನ್ನು ಬೌಂಡರಿ ಲೆಕ್ಕಚಾರದಲ್ಲಿ ವಿಜೇತರನ್ನು ಘೋಷಿಸಲಾಗಿತ್ತು. ಆದರೆ ಈ ನಿಯಮಕ್ಕೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾದ ಮೇಲೆ ಐಸಿಸಿ ಫಲಿತಾಂಶ ಬರುವವರೆಗೂ ಸೂಪರ್ ಓವರ್ ನಡೆಸಲು ಘೋಷಣೆ ಮಾಡಿತ್ತು.