ಲಂಡನ್: 2019ರ ವಿಶ್ವಕಪ್ ಇಂಗ್ಲೆಂಡ್ ಪಾಲಾಗಲು ಕಾರಣರಾದ ಬೆನ್ ಸ್ಟೋಕ್ಸ್ರನ್ನು 'ನ್ಯೂಜಿಲ್ಯಾಂಡರ್ ಆಫ್ ದಿ ಇಯರ್' ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಆದರೆ ಸ್ವತಃ ಅವರೇ ನನಗಿಂತ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಆ ಗೌರವಕ್ಕೆ ಸೂಕ್ತ ಎಂದು ಹೇಳಿಕೆ ನೀಡಿದ್ದಾರೆ.
ವಿಶ್ವಕಪ್ ಪೈನಲ್ನಲ್ಲಿ ಸ್ವತಃ ತವರು ತಂಡದ ವಿರುದ್ಧವೇ ಅದ್ಭುತ ಪ್ರದರ್ಶನ ತೋರಿದ್ಧ ಬೆನ್ಸ್ಟೋಕ್ಸ್ 84 ರನ್ಗಳಿಸಿ ಸೋಲುವ ಪಂದ್ಯವನ್ನು ಟೈ ಆಗುವಂತೆ ಮಾಡಿದ್ದರು. ನಂತರ ಸೂಪರ್ ಓವರ್ನಲ್ಲಿ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಆದರೆ ಬೌಂಡರಿಗಳ ಆಧಾರದ ಮೇಲೆ ಇಂಗ್ಲೆಂಡ್ ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ನಿರ್ಧಾರ ಕ್ರಿಕೆಟ್ ವಲಯದಲ್ಲಿ ವಿವಾದ ಎಬ್ಬಿಸಿತ್ತು.
ಆದರೆ ಐಸಿಸಿ ನಿಯಮದಂತೆ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು. ಇದಕ್ಕೆ ಕಾರಣರಾದ ಕಿವೀಸ್ನಲ್ಲಿ ಹುಟ್ಟಿದ ಬೆನ್ಸ್ಟೋಕ್ಸ್. ಹೀಗಾಗಿ ಅವರನ್ನು 'ನ್ಯೂಜಿಲ್ಯಾಂಡ್ ಆಫ್ ದಿ ಇಯರ್'ಗೆ ನಾಮಿನೇಟ್ ಮಾಡಲಾಗಿತ್ತು. ಇವರ ಜೊತೆ ಕೇನ್ ವಿಲಿಯಮ್ಸನ್ರನ್ನು ಕೂಡ ಈ ಪ್ರಶಸ್ತಿಗೆ ನಾಮಿನೇಟ್ ಮಾಡಲಾಗಿದೆ.
ಈ ಕುರಿತು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಇಡೀ ವಿಶ್ವಕಪ್ ಟೂರ್ನಿಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದ ತಮ್ಮ ತಂಡವನ್ನು ಫೈನಲ್ವರೆಗೂ ಕರೆತಂದಿದ್ದ ವಿಲಿಯಮ್ಸನ್ ನಿಜಕ್ಕೂ 'ನ್ಯೂಜಿಲ್ಯಾಂಡ್ ಆಪ್ ದಿ ಇಯರ್' ಗೌರವಕ್ಕೆ ಸೂಕ್ತರಾದವರು ಎಂದು ಹೇಳಿದ್ದಾರೆ.
ವಿಲಿಯಮ್ಸನ್ರನ್ನು ನ್ಯೂಜಿಲ್ಯಾಂಡ್ ಜನತೆ ಕೂಡ ಬೆಂಬಲಿಸಲಿದ್ದಾರೆ. ನಾನೊಬ್ಬ ನ್ಯೂಜಿಲ್ಯಾಂಡಿಗನಾಗಿ ನನ್ನ ವೋಟನ್ನು ಕೂಡ ವಿಲಿಯಮ್ಸನ್ಗೆ ನೀಡಲಿದ್ದೇನೆ ಎಂದು ಸ್ಟೋಕ್ಸ್ ತಿಳಿಸಿದ್ದಾರೆ.