ಬ್ರಿಸ್ಬೇನ್: ಜೋ ಬರ್ನ್ಸ್ ಭಾರತದ ವಿರುದ್ಧ ಮೊದಲೆರಡು ಟೆಸ್ಟ್ ತಂಡದಲ್ಲಿ ಕಳೆಪೆ ಪ್ರದರ್ಶನ ತೋರಿ ಕೊನೆಯ ಟೆಸ್ಟ್ ತಂಡದಿಂದ ಹೊರಬಿದ್ದಿದ್ದರು. ಆದರೆ ಇಂದು ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಚ್ಚರಿ ಮೂಡಿಸಿದ್ದಾರೆ.
ದೇಶಿ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಅನುಭವಿಸಿದರೂ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಜೋ ಬರ್ನ್ಸ್ಗೆ ಅವಕಾಶ ನೀಡಲಾಗಿತ್ತು. ಆದರೆ ಆರಂಭಿಕ ಬ್ಯಾಟ್ಸ್ಮನ್ ಮೊದಲ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಮೂರು ಇನ್ನಿಂಗ್ಸ್ಗಳಲ್ಲಿ 0,4, 8 ರನ್ಗಳಿಗೆ ಔಟ್ ಆಗಿ ವಾರ್ನರ್, ವಿಲ್ ಪುಕೋವ್ಸ್ಕಿ ಅವರ ಅನುಪಸ್ಥಿತಿಯಲ್ಲಿ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿದ್ದರು.
ರಾಷ್ಟ್ರೀಯ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಜೋ ಬರ್ನ್ಸ್ ಬಿಬಿಎಲ್ನಲ್ಲಿ ಬ್ರಿಸ್ಬೇನ್ ಪರ ಕಣಕ್ಕಿಳಿದಿದ್ದರು. ಅಲ್ಲೂ ಕೂಡ ಮೊದಲ ಪಂದ್ಯದಲ್ಲಿ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ತಿರುಗಿಬಿದ್ದು ಆಕರ್ಷಕ ಅರ್ಧಶತಕ ದಾಖಲಿಸಿ ಮಿಂಚಿದ್ದಾರೆ.
ಸಿಡ್ನಿ ಥಂಡರ್ ನೀಡಿದ 175 ರನ್ಗಳ ಗುರಿಯನ್ನು ಬೆನ್ನತ್ತಿದ ಬ್ರಿಸ್ಬೇನ್ ಪರ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದರು. 3ನೇ ವಿಕೆಟ್ಗೆ ಜೋ ಡೆನ್ಲಿ ಜೊತೆಗೂಡಿ 90 ರನ್ಗಳ ಜೊತೆಯಾಟ ನೀಡಿ ಬರ್ನ್ಸ್ ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 52 ರನ್ ಗಳಿಸಿ 9 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು. ಆವರು ತಮ್ಮ ಅದ್ಭುತ ಇನ್ನಿಂಗ್ಸ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಇನ್ನಿಂಗ್ಸ್ ಜೋ ಬರ್ನ್ಸ್ಗೆ ಆತ್ಮವಿಶ್ವಾಸ ಹೆಚ್ಚಿಸಿದ್ದು, ಒಂದು ವೇಳೆ ಶೇಕಾಡ 100ರಷ್ಟು ಫಿಟ್ ಇಲ್ಲದ ವಾರ್ನರ್ ಮತ್ತು ವಿಲ್ ಪುಕೋವ್ಸ್ಕಿ ಮೂರನೇ ಪಂದ್ಯದಲ್ಲಿ ವಿಫಲರಾದರೆ ಕೊನೆಯ ಪಂದ್ಯದಲ್ಲಿ ಬರ್ನ್ಸ್ ಅವಕಾಶ ಪಡೆಯುವ ನಿರೀಕ್ಷೆಯಿದೆ.