ಮುಂಬೈ:ಟೀಂ ಇಂಡಿಯಾ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹೆಸರು ಪ್ರಸಕ್ತ ವರ್ಷದ ಕ್ರೀಡಾ ಪ್ರಶಸ್ತಿ ಅರ್ಜುನ್ ಅವಾರ್ಡ್ಗೆ ಶಿಫಾರಸುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.ಈ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷ ರವಿಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಜತೆ ಬುಮ್ರಾ ಹೆಸರು ಕೂಡ ಶಿಫಾರಸು ಮಾಡಲಾಗಿತ್ತು. ಆದರೆ ಹೆಚ್ಚು ಅನುಭವ ಇಲ್ಲದ ಕಾರಣ ಅವರು ಪ್ರಶಸ್ತಿಯಿಂದ ವಂಚಿತರಾಗಿದ್ದರು. ಹೀಗಾಗಿ ಈ ಸಲ ಮತ್ತೊಮ್ಮೆ ಬಿಸಿಸಿಐ ಇವರ ಹೆಸರು ಶಿಫಾರಸು ಮಾಡಿದ್ದು, ಇವರ ಜತೆಗೆ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹೆಸರು ಶಿಫಾರಸು ಮಾಡುವ ಸಾಧ್ಯತೆ ದಟ್ಟವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರು ವರ್ಷ ಮುಕ್ತಾಯ ಮಾಡಿರುವ ಬುಮ್ರಾ ಈಗಾಗಲೇ ಐಸಿಸಿ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1ಬೌಲರ್ ಆಗಿದ್ದು, ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. 26 ವರ್ಷದ ಈ ಪ್ಲೇಯರ್ 14 ಟೆಸ್ಟ್ ಪಂದ್ಯಗಳಿಂದ 68 ವಿಕೆಟ್, 64 ಏಕದಿನ ಪಂದ್ಯಗಳಿಂದ 104 ವಿಕೆಟ್ ಹಾಗೂ 50 ಟಿ-20 ಪಂದ್ಯಗಳಿಂದ 59 ವಿಕೆಟ್ ಪಡೆದುಕೊಂಡಿದ್ದಾರೆ.
ಇನ್ನು ಮೊಹಮ್ಮದ್ ಶಮಿ ಮೇಲೆ ಅವರ ಪತ್ನಿ ಕೇಸ್ ಹಾಕಿರುವ ಕಾರಣ ಪ್ರಶಸ್ತಿ ನೀಡಲು ಸಾಧ್ಯವಿಲ್ಲ. ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಆರ್.ಅಶ್ವಿನ್, ರೋಹಿತ್ ಶರ್ಮಾ, ರಹಾನೆ, ಚೇತೇಶ್ವರ್ ಪೂಜಾರ್, ಜಡೇಜಾ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.
2018ರಲ್ಲಿ ಶಿಖರ್ ಧವನ್ ಹೆಸರು ಶಿಫಾರಸು ಮಾಡಲಾಗಿತ್ತು. ಆದರೆ ಸ್ಮೃತಿ ಮಂಧಾನಾ ಈ ಅವಾರ್ಡ್ ಪಡೆದುಕೊಂಡಿದ್ದರು. ಮಹಿಳಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆಲ್ರೌಂಡರ್ ದೀಪ್ತಿ ಶರ್ಮಾ ಹಾಗೂ ಬೌಲರ್ ಶಿಖಾ ಪಾಂಡೆ ಹೆಸರು ಶಿಫಾರಸು ಮಾಡುವ ಸಾಧ್ಯತೆ ಇದೆ.