ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಮಧ್ಯೆ ಡಿಸೆಂಬರ್ 19 ರಂದು 2020ರ ಐಪಿಎಲ್ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯಲಿರುವುದರಿಂದ ಅದರ ಮೇಲೆ ಆತಂಕದ ಕರಿಛಾಯೆ ಮೂಡಿದೆ.
ಸಿಎಬಿ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಕೂಡ ಒಂದು ಆಗಿರುವುದರಿಂದ ಎಲ್ಲಾ ಪ್ರಾಂಚೈಸಿಗಳೂ ಕೋಲ್ಕತ್ತಾದಲ್ಲಿ ಪ್ರತಿಭಟನೆ ಸ್ಥಿತಿಗತಿ ಹೇಗಿದೆ ಎಂಬುದರ ಕಡೆಗೆ ಕಣ್ಣಾಯಿಸುತ್ತಿದ್ದಾರೆ.
"ಖಂಡಿತವಾಗಿಯೂ ರಾಜ್ಯದಲ್ಲಿ ಪ್ರತಿಭಟನೆ ಯಾವ ಮಟ್ಟಕ್ಕಿದೆ ಎಂಬುದನ್ನ ಗಮನಿಸುತ್ತಿದ್ದೇವೆ. ಪ್ರತಿಭಟನೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲವಾದರೂ ಅಲ್ಲಿನ ಆಗುಹೋಗುಗಳ ಬಗ್ಗೆ ಕಣ್ಣಿಟ್ಟಿದ್ದೇವೆ. ಐಪಿಎಲ್ ಹರಾಜು ಪ್ರಕ್ರಿಯೆ ಗುರುವಾರ ನಡೆಯಲಿದೆ. ಪ್ರತಿಭಟನೆ ಸೋಮವಾರ(ಇಂದು) ನಡೆಯುತ್ತಿದೆ. ಆದ್ದರಿಂದ ಅಲ್ಲಿನ ಮುಂದಿನ ಎರಡು ದಿನಗಳ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ನಮಗಿದೆ" ಎಂದು ಪ್ರಾಂಚೈಸಿ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.