ನವದೆಹಲಿ: 2021 ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮುಂಚಿತವಾಗಿ ಫೆ.18 ಅಥವಾ 19 ರಂದು ಮಿನಿ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮೂಲಗಳು 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಫೆ. 18 ಅಥವಾ 19 ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಚೆನ್ನೈನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಫೆ.17 ಮುಕ್ತಾಯವಾಗಲಿದೆ. ಹೀಗಾಗಿ ಆ ದಿನಗಳನ್ನು ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುತ್ತದೆ' ಎಂದು ಹೇಳಿವೆ.
ಈ ಬಾರಿ ಭಾರತದಲ್ಲೇ ಟೂರ್ನಿ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 'ಟೂರ್ನಿಗೆ ಮೊದಲ ಆಯ್ಕೆ ಭಾರತವೇ ಆಗಿರುತ್ತದೆ. ಮುಷ್ತಾಕ್ ಅಲಿ ಟೂರ್ನಿ ಮುಕ್ತಾಯದ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಸರ್ಕಾರದ ಅನುಮತಿ ಕೇಳಲಾಗುವುದು. ಕಳೆದ ಬಾರಿಯಂತೆ ಈ ಬಾರಿಯೂ ಯುಎಇ ನಮ್ಮ ಎರಡನೇ ಆಯ್ಕೆಯಾಗಿರುತ್ತದೆ' ಎಂದು ಮೂಲಗಳು ತಿಳಿಸಿವೆ.
ಕೊರೊನಾ ಸಾಂಕ್ರಾಮಿಕ ಭೀತಿಯ ನಡುವೆಯೂ 2020ರ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿಕೊಡುವಲ್ಲಿ ಬಿಸಿಸಿಐ ಸಫಲವಾಗಿದ್ದು. ಯುಎಇ ಅಲ್ಲಿ ಬಯೋ ಬಬಲ್ ವ್ಯವಸ್ಥೆಯಲ್ಲಿ ಟೂರ್ನಿ ನಡೆಸಿ ಯಶಸ್ವಿಯಾಗಿತ್ತು.