ನವದೆಹಲಿ :ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈಗಾಗಲೇ 12 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಪ್ರತಿನಿಧಿಸಿದ್ದಾರೆ. ಇದೀಗ ಯುಎಇನಲ್ಲಿ ನಡೆಯುವ 13ನೇ ಆವೃತ್ತಿಯಲ್ಲೂ ಆರ್ಸಿಬಿಯನ್ನು ಮುನ್ನಡೆಸುವುದಕ್ಕೆ ತಾವು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಆರ್ಸಿಬಿ ನಾಯಕ, "ನಿಷ್ಠೆ ಎಲ್ಲದಕ್ಕಿಂದ ದೊಡ್ಡದು, ಏನು(ಐಪಿಎಲ್) ಬರ್ತಿದಿಯೋ ಅದಕ್ಕಾಗಿ ಕಾಯಲಾಗುತ್ತಿಲ್ಲ" ಎಂದು ತಾವು ಐಪಿಎಲ್ನಲ್ಲಿ ಆಡುವುದಕ್ಕೆ ಕಾತುರದಿಂದಿದ್ದೇನೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಕೊಹ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಆರ್ಸಿಬಿ ಕುಟುಂಬದ ಜೊತೆ ಮೊದಲ ಆವೃತ್ತಿಯಿಂದಲೂ ಮೈದಾನ, ಡ್ರೆಸಿಂಗ್ ರೂಮ್ನಲ್ಲಿ ಕಳೆದಿರುವ ಮಧುರ ಕ್ಷಣಗಳನ್ನು ಒಟ್ಟುಗೂಡಿಸಿ ಸಂಯೋಜಿಸಿದ್ದಾರೆ.
ಆರ್ಸಿಬಿಯನ್ನು ತಾವೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೊಳ್ಳುವ ಕೊಹ್ಲಿ, ಬೆಂಗಳೂರು ಪರ 177 ಐಪಿಎಲ್ ಪಂದ್ಯಗಳಲ್ಲಿ 5412 ರನ್ ಸಿಡಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಬಾರಿಆರ್ಸಿಬಿ ತಂಡ ಸಾಕಷ್ಟು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಆಸೀಸ್ ನಾಯಕ ಫಿಂಚ್, ದಕ್ಷಿಣ ಆಫ್ರಿಕಾದ ಕ್ರಿಸ್ ಮೊರೀಸ್, ಸ್ಟೈನ್ ಆರ್ಸಿಬಿ ಸೇರಿಕೊಂಡಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ದಿಗ್ಗಜ ಬ್ರಾಡ್ ಹಾಗ್ "ಯುಎಇನಲ್ಲಿ ಐಪಿಎಲ್ ನಡೆಯುತ್ತಿರುವುದರಿಂದ ಆರ್ಸಿಬಿಗೆ ಹೆಚ್ಚಿನ ಲಾಭವಾಗಲಿದೆ. ಕೊಹ್ಲಿ ಬಳಗ ಈ ಬಾರಿ ಐಪಿಎಲ್ ಎತ್ತಿ ಹಿಡಿಯುವ ನೆಚ್ಚಿನ ತಂಡ" ಎಂದು ಅಭಿಪ್ರಾಯಪಟ್ಟಿದ್ದರು.