ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಂತರ ಸತತ ಮೂರು ಪಂದ್ಯಗಳಲ್ಲಿ ಅಗ್ರ ಮೂರು ತಂಡಗಳನ್ನೆ ಬಗ್ಗು ಬಡಿದು ಪ್ಲೇ ಆಫ್ ಹಾದಿಯಲ್ಲಿ ಅನೂ ಇರುವುದಾಗಿ ಗುರುತಿಸಿಕೊಂಡಿದೆ. ಆದರೆ ಪಂಜಾಬ್ ಯಶಸ್ಸಿಗೆ ಕಾರಣ ಕ್ರಿಸ್ ಗೇಲ್ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡಿದ್ದ 7 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 6 ಸೋಲು ಕಂಡಿದ್ದ ಪಂಜಾಬ್ ಗೇಲ್ ಬಂದೊಡನೆ ಬೆಂಗಳೂರು, ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದೆ.
" ಕ್ರಿಸ್ ಗೇಲ್ ಬಗ್ಗೆ ಜನರು ಯಾವಾಗಲೂ ಅವರ ದೊಡ್ಡ ಹೊಡೆತಗಳ ಬಗ್ಗೆ ಮಾತನಾಡುತ್ತಾರೆ. ಅದು ಎಲ್ಲರಿಗೂ ತಿಳಿದಿದೆ. ಆದರೆ ಹೆಚ್ಚಿನ ಜನರಿಗೆ ಗೇಲ್ ಓಬ್ಬ ಚಾಣಾಕ್ಷ ಆಟಗಾರ ಎಂಬುದನ್ನು ಗುರುತಿಸಿಲ್ಲ. ಅವರು ಬಿಗ್ ಹಿಟ್ಟರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಆತ ಅಷ್ಟೇ ಬುದ್ಧಿವಂತ " ಎಂದು ಸಚಿನ್ ವಿವರಿಸಿದ್ದಾರೆ.
"ಗೇಲ್ ಯಾವುದೇ ಬೌಲರ್ ತನ್ನನ್ನು ಔಟ್ ಮಾಡಬಲ್ಲ ಎಂಬ ಭೀತಿ ಉಂಟಾದರೆ ಆತನ ಓವರ್‌ನಲ್ಲಿ ಎಚ್ಚರಿಕೆಯಾಗಿ ಆಡಿ ಮುಗಿಸುತ್ತಾರೆ. ಬಳಿಕ ಓರ್ವ ಅಥವಾ ಇಬ್ಬರು ಬೌಲರ್‌ಗಳನ್ನು ಟಾರ್ಗೆಟ್ ಮಾಡುತ್ತಾರೆ. ಡೆಲ್ಲಿ ವಿರುದ್ದದ ಪಂದ್ಯದಲ್ಲಿ ತುಷಾರ್ ದೇಶಪಾಂಡೆಯನ್ನು ಗುರಿಯಾಗಿಸಿದ ರೀತಿಯಲ್ಲಿ ಬೆಂಡೆತ್ತುತ್ತಾರೆ. ಅವರು ಆ ಒಂದು ಓವರ್‌ನಲ್ಲಿ 26 ರನ್ ಚಚ್ಚಿದ್ದರೆಂದು" ಸಚಿನ್ ತಮ್ಮ ಅಧಿಕೃತ ಟ್ವಿಟರ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಪಂಜಾಬ್ ತಂಡ 10 ಪಂದ್ಯಗಳಲ್ಲಿ 4 ಗೆಲುವು ಹಾಗೂ 6 ಸೋಲುಗಳೊಂದಿಗೆ 8 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪ್ಲೇ ಆಫ್ನ 4ನೇ ತಂಡಕ್ಕಾಗಿ ಕೆಕೆಆರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಜೊತೆ ಪೈಪೋಟಿ ನಡೆಸುತ್ತಿದೆ.