ಪುಣೆ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಮತ್ತು ಅಂತಿಮ ಟಿ-20 ಪಂದ್ಯ ಪುಣೆಯಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿ 1-0 ಅಂಕಗಳ ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನೂ ಗೆದ್ದು ಟಿ-20 ಸರಣಿಯನ್ನು ಕೈವಶ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದೆ.
ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೊಹ್ಲಿ ಹುಡುಗರು ಯಾವುದೇ ಕ್ಷಣದಲ್ಲೂ ಪ್ರವಾಸಿ ತಂಡವನ್ನು ಮೇಲುಗೈ ಸಾಧಿಸಲು ಬಿಡಲಿಲ್ಲ. ಬೌಲಿಂಗ್‌ನಲ್ಲಿ ಕಂಬ್ಯಾಕ್ ಮಾಡಿರುವ ಜಸ್ಪ್ರಿತ್ ಬುಮ್ರಾ ಉತ್ತಮವಾಗಿ ಬೌಲ್ ಮಾಡಿದ್ದು, ಪಂದ್ಯದುದ್ದಕ್ಕೂ ಅಭ್ಯಾಸದ ಕೊರತೆ ಇದ್ದಂತೆ ಕಾಣಲಿಲ್ಲ. ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಶಿಖರ್ ಧವನ್ ಅಮೋಘ ಫಾರ್ಮ್ನಲ್ಲಿದ್ದಾರೆ. ವಿರಾಟ್ ಕೊಹ್ಲಿ,ಶ್ರೇಯಸ್ ಐಯ್ಯರ್ ಕೂಡ ಕಳೆದ ಪಂದ್ಯದಲ್ಲಿ ಮಿಂಚಿದ್ದು ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಬಲಿಷ್ಠವಾಗಿದೆ.
ಇತ್ತ ಪ್ರವಾಸಿ ತಂಡ ಇಂದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಉದ್ದೇಶ ಹೊಂದಿದೆ. ಸರಣಿಯಲ್ಲಿ ಸಮಬಲ ಸಾಧಿಸಬೇಕಾದ್ರೆ ಎಲ್ಲಾ ವಿಭಾಗದಲ್ಲೂ ಲಂಕಾ ಆಟಗಾರರು ಉತ್ತಮ ಪ್ರದರ್ಶನ ತೋರಬೇಕು. ಕಳೆದ ಪಂದ್ಯದಲ್ಲಿ ಪ್ರವಾಸಿ ತಂಡ ಹೆಚ್ಚು ಡಾಟ್ ಬಾಲ್ಗಳನ್ನು ಎದುರಿಸಿತು. ಅಲ್ಲದೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ಲಂಕಾ ತಂಡ ವಿಫಲವಾಯಿತು.
ಸಂಭಾವ್ಯ ತಂಡಗಳು:
ಭಾರತ:ವಿರಾಟ್ ಕೊಹ್ಲಿ (ನಾಯಕ) ಕೆ.ಎಲ್. ರಾಹುಲ್, ಜಸ್ಪ್ರೀತ್ ಬುಮ್ರಾ, ಶಿಖರ್ ಧವನ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ನವದೀಪ್ ಸೈನಿ, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್
ಶ್ರೀಲಂಕಾ:ಲಸಿತ್ ಮಾಲಿಂಗ (ನಾಯಕ), ಧನಂಜಯ್ ಡಿಸಿಲ್ವಾ, ಹಸರಂಗ, ಓಷಾಡ ಫರ್ನಾಂಡೊ, ಅವಿಷ್ಕಾ ಫರ್ನಾಂಡೊ, ದನುಷ್ಕಾ ಗುಣತಿಲಕ, ಲಹಿರು ಕುಮಾರ, ದಾಸುನ್ ಶನಕ, ಏಂಜೆಲೋ ಮ್ಯಾಥ್ಯೂಸ್, ಭಾನುಕ ರಾಜಪಕ್ಸ, ಕುಸಲ್ ಪಿರೇರಾ