ನವದೆಹಲಿ:ಕೋವಿಡ್ 19 ಭೀತಿಯಿಂದ ಐಸಿಸಿ 2020ರ ಟಿ-20 ವಿಶ್ವಕಪ್ ಕೂಟವನ್ನು ಮುಂದೂಡಿದೆ. ಇದೇ ಸಂದರ್ಭದಲ್ಲಿ 2023 ರ 50 ಓವರ್ಗಳ ವಿಶ್ವಕಪ್ ಅಕ್ಟೋಬರ್- ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡಿದೆ.
ಸದ್ಯದ ಮಾಹಿತಿ ಪ್ರಕಾರ 2021ರ ಟಿ-20 ವಿಶ್ವಕಪ್ನ ಆತಿಥ್ಯವನ್ನು ಭಾರತ ವಹಿಸಿಕೊಳ್ಳಲಿದೆ. ಆದರೆ, 2020ರ ಆವೃತ್ತಿಯನ್ನು ಆಸ್ಟ್ರೇಲಿಯಾ ನಡೆಸಲು ಸಾಧ್ಯವಾಗದ ಕಾರಣ , ಅವರು 2021ರ ವಿಶ್ವಕಪ್ ಆತಿಥ್ಯ ತಮಗೆ ನೀಡಿ 2022ರ ಆತಿಥ್ಯವನ್ನು ಭಾರತಕ್ಕೆ ನೀಡುವಂತೆ ಐಸಿಸಿಗೆ ಮನವಿ ಮಾಡಿಕೊಂಡಿದ್ದಾರೆ.
ಐಸಿಸಿ 2021 ಮತ್ತು 2022ರ ಟಿ-20 ವಿಶ್ವಕಪ್ ಆಥಿತ್ಯ ವಹಿಸುವ ಸ್ಥಳವನ್ನು ಇನ್ನು ಘೋಷಣೆ ಮಾಡಿಲ್ಲ. ಕಾರಣ ಮುಂದಿನ ವರ್ಷದ ವಿಶ್ವಕಪ್ ಹಕ್ಕು ಹೊಂದಿರುವ ಭಾರತ ಆಸ್ಟ್ರೇಲಿಯಾಕ್ಕೆ ಹಸ್ತಾಂತರಿಸುತ್ತದೆಯೇ ಎಂಬುದರ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಐಸಿಸಿ ಸದಸ್ಯರೊಬ್ಬರು ಹೇಳಿದ್ದಾರೆ.
"ಟಿ20 ವಿಶ್ವಕಪ್ಗಳ ಸ್ಥಳವನ್ನು ಗೊತ್ತು ಮಾಡದಿರುವುದು ಮತ್ತು 2023ರ ವಿಶ್ವಕಪ್ ಟೂರ್ನಿಯನ್ನು ಕೆಲವು ತಿಂಗಳು ಮುಂದೂಡಿರುವ ಕಾರಣ 2021ರ ಆತಿಥ್ಯ ಆಸ್ಟ್ರೇಲಿಯಾಕ್ಕೆ ಹೋದರೆ ಮತ್ತು ಭಾರತ 2023ರ ಆತಿಥ್ಯವನ್ನು ಭಾರತ ವಹಿಸಿದರೆ ಬ್ರಾಡ್ಕಾಸ್ಟರ್ಗಳಿಗೆ ಉಸಿರಾಡಲು ಜಾಗಮಾಡಿಕೊಟ್ಟಂತಾಗುತ್ತದೆ. ಅಲ್ಲದೇ 2022ರ ಟಿ -20 ಹಾಗೂ 2023ರ ಏಕದಿನ ವಿಶ್ವಕಪ್ಗಳನ್ನು 6 ತಿಂಗಳಲ್ಲಿ ಭಾರತದಲ್ಲಿ ಆಯೋಜಿಸುವುದು ಕಷ್ಟ ಸಾಧ್ಯವಾಗುತ್ತದೆ" ಎಂದು ಅವರು ವಿವರಿಸಿದ್ದಾರೆ.
ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಇದು ಭಾರತೀಯ ಮಂಡಳಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಎರಡೂ ಒಗ್ಗಟ್ಟಿನಿಂದ ತೆಗೆದುಕೊಳ್ಳುವ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.
" ಬಿಸಿಸಿಐ ಮತ್ತು ಸಿಎ ಬಹಳ ಬಲವಾದ ಸಂಬಂಧ ಹೊಂದಿವೆ ಮತ್ತು ಈ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಪರಸ್ಪರ ನಂಬಿಕೆಯನ್ನು ಇಟ್ಟುಕೊಂಡು ಎರಡು ಮಂಡಳಿಗಳ ನಡುವಿನ ಚರ್ಚೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ " ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.