ಮೆಲ್ಬೋರ್ನ್:ವಿಶ್ವಕಪ್ ಟಿ-20 ಟೂರ್ನಿಯ ಮೂರನೇ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಕಿವೀಸ್ ವಿರುದ್ಧ 4 ರನ್ಗಳ ಜಯ ದಾಖಲಿಸಿ ಸೆಮಿಫೈನಲ್ ಹಂತ ತಲುಪಿದೆ.
ಟೀಂ ಇಂಡಿಯಾ ವನಿತೆಯರು ನೀಡಿದ್ದ 134 ರನ್ಗಳ ಗುರಿ ಬೆನ್ನತ್ತಿದ ಕಿವೀಸ್ ವನಿತೆಯರು ಆರಂಭಿಕ ಆಘಾತ ಅನುಭವಿಸಿದ್ರು. 34 ರನ್ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ತಂಡಕ್ಕೆ ಆಸರೆಯಾದ ಮ್ಯಾಡಿ ಗ್ರೀನ್(24) ಮತ್ತು ಕೇಟಿ ಮಾರ್ಟಿನ್(25) ತಂಡಕ್ಕೆ ಆಸರೆಯಾದ್ರು. ಉತ್ತಮ ಬೌಲಿಂಗ್ ದಾಳಿ ನಡೆಸಿದ ರಾಜೇಶ್ವರಿ ಗಾಯಕ್ವಾಡ್ ಮತ್ತು ರಾಧಾ ಯಾದವ್ ಈ ಇಬ್ಬರು ಆಟಗಾರ್ತಿಯರನ್ನು ಪೆವಿಲಿಯನ್ ಸೇರಿಸಿದ್ರು.
ಕೊನೇಯ ಕ್ಷಣದಲ್ಲಿ ಅಮೆಲಿಯಾ ಕೆರ್(34) 19ನೇ ಓವರ್ನಲ್ಲಿ 18 ರನ್ ಗಳಿಸುವ ಮೂಲಕ ಕಿವೀಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ರು. ಆದ್ರೆ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ವನಿತೆಯರು 130 ರನ್ಗಳಿಗೆ ಕಿವೀಸ್ ತಂಡವನ್ನು ಕಟ್ಟಿಹಾಕಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ರು.
ಭಾರತ ತಂಡದ ಪರ ದೀಪ್ತಿ ಶರ್ಮಾ, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ ವನಿತೆಯರ ತಂಡಕ್ಕೆ ಶೆಫಾಲಿ ಉತ್ತಮ ಕೊಡುಗೆ ನೀಡಿದ್ದರು. ಸ್ಫೋಟಕ ಆಟವಾಡಿದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದ್ರು. ನಿಧಾನಗತಿಯ ಬ್ಯಾಟಿಂಗ್ ನಡೆಸಿದ ತಾನಿಯಾ ಭಾಟಿಯಾ 23 ರನ್ಗಳಿಸಿದ್ರು.
ಈ ಇಬ್ಬರು ಆಟಗಾರ್ತಿಯರನ್ನು ಹೊರತುಪಡಿಸಿ ಯಾರೊಬ್ಬರೂ ಕೂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ ವನಿತೆಯರು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ಗಳಿಸಿದ್ದರು.