ಲಂಡನ್:2019 ರ ವಿಶ್ವಕಪ್ ಟೂರ್ನಿಯ ವೀಕ್ಷಣೆ ವಿವರವನ್ನು ಐಸಿಸಿ ಬಹಿರಂಗಗೊಳಿಸಿದ್ದು, ಈ ಬಾರಿ ದಾಖಲೆಯ ವೀಕ್ಷಣೆಯಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.
ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವಿಡಿಯೋ ತುಣಕುಗಳನ್ನು ವಿಶ್ವಾದ್ಯಂತ 460 ಕೋಟಿಗೂ ಹೆಚ್ಚು ವೀಕ್ಷಣೆಗೆ ಒಳಗಾಗಿದೆ. ಇನ್ನು ಫೇಸ್ಬುಕ್ ಹಾಗೂ ಯೂಟ್ಯೂಬ್ಗಳಲ್ಲಿ 350 ಕೋಟಿ ನಿಮಿಷಗಳ ಅವಧಿಯಲ್ಲಿ ವೀಕ್ಷಿಸಲಾಗಿದೆ ಎಂದು ಐಸಿಸಿ ದೃಢಪಡಿಸಿದೆ.
ಇನ್ನು ಇಡೀ ಟೂರ್ನಿಯಲ್ಲಿ 3.1 ಕೋಟಿ ಟ್ವೀಟ್ಗಳು ಐಸಿಸಿ ವಿಶ್ವಕಪ್ ಕುರಿತು ಬಂದಿದೆ. ಐಸಿಸಿ ಇನ್ಸ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ಶೇರ್ ಆದ ವಿಡಿಯೋ ತುಣಕುಗಳು 3 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿವೆ. ಐಸಿಸಿ ಯೂಟ್ಯೂಬ್ ಚಾನೆಲ್‌ನಲ್ಲಿ 230(2.3 ಬಿಲಿಯನ್) ಕೋಟಿಗೂ ಹೆಚ್ಚಿನ ನಿಮಿಷಗಳು, ಫೇಸ್‌ಬುಕ್‌ನಲ್ಲಿ 120 ಕೋಟಿಗಿಂತ ಹೆಚ್ಚು ನಿಮಿಷಗಳ ಅವಧಿಯಲ್ಲಿ ವೀಕ್ಷಿಸಲಾಗಿದೆ. 1000 ಕೋಟಿಗೂ ಹೆಚ್ಚು ಇಂಪ್ರೆಸನ್ಸ್ ಹಾಗೂ 6.8 ಕೋಟಿ ಎಂಗೇಜ್ಮೆಂಟ್ ಪಡೆದುಕೊಂಡಿದೆ.
ಈ ಕುರಿತು ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ' 2019 ವಿಶ್ವಕಪ್ ಟೂರ್ನಿಯನ್ನು ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಮಾಡಲಾಗಿದೆ. ಕ್ರಿಕೆಟ್ಗೆ ವಿಶ್ವವನ್ನೇ ಒಗ್ಗೂಡಿಸುವ ಶಕ್ತಿ ಇದೆ ಎಂಬುದು ಇದರಿಂದ ಸಾಬೀತಾಗಿದೆ. ಈ ಬಾರಿ ಬಹಳಷ್ಟು ಹೊಸ ಅಭಿಮಾನಿಗಳು ಹೆಚ್ಚು ಪಂದ್ಯಗಳ ವೀಕ್ಷಣೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.
ಟ್ವಿಟರ್ನಲ್ಲಿ ಕೊಹ್ಲಿ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ರನ್ನು ಗೌರವಿಸುವಂತೆ ಅಭಿಮಾನಿಗಳ ಬಳಿ ಕೇಳಿಕೊಂಡಿರುವ ವಿಡಿಯೋ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.