ಮುಂಬೈ: ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ-20 ವಿಶ್ವಕಪ್ ಮೂಂದೂಡಲು ಐಸಿಸಿ ನಿರ್ಧರಿಸಿದೆ ಎಂಬ ಮಾತು ಕೇಳಿಬರುತ್ತಿದ್ದು, ನಾಳೆ ನಡೆಯುವ ಐಸಿಸಿ ವಾರ್ಷಿಕ ಸಭೆಯಲ್ಲಿ ವಿಶ್ವಕಪ್ ಮುಂದೂಡಿಕೆ ವಿಚಾರದ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ.
ಗುರುವಾರ ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಐಸಿಸಿ ಇತರೆ ಕ್ರಿಕೆಟ್ ಮಂಡಳಿಗಳ ಜೊತೆ ಸಭೆ ನಡೆಸಲಿದ್ದು, ಈ ವೇಳೆ ವಿಶ್ವಕಪ್ ಮುಂದೂಡಲಾಗುವುದೇ ಅಥವಾ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಸಲಾಗುತ್ತದೆಯೇ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. 2021ಕ್ಕೆ ಭಾರತದಲ್ಲಿ ಟಿ-20 ವಿಶ್ವಕಪ್ ನಡೆಯುವುದರಿಂದ ಒಂದೇ ವರ್ಷ 2 ವಿಶ್ವಕಪ್ ಆಯೋಜಿಸುವುದು ಅಸಾಧ್ಯವಾಗುತ್ತದೆ.
ಗುರುವಾರ ನಡೆಯುವ ಐಸಿಸಿ ಸಭೆಯಲ್ಲಿ ವಿಶ್ವ ಟಿ-20 ಟೂರ್ನಿಯನ್ನು ಮುಂದೂಡುವ ನಿರ್ಧಾರದ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಟಿ-20 ವಿಶ್ವಕಪ್ ನಡೆಸುವ ಅಕವಾಶ ಕೂಡ ಕಡಿಮೆಯಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಅಥವಾ ಬೇರೆ ಕ್ರಿಕೆಟ್ ಮಂಡಳಿಗಳಿಗೂ ವಿಶ್ವಕಪ್ ಪಂದ್ಯಾವಳಿ ಬಯಸುತ್ತಿಲ್ಲ ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಷ್ಟದಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ವಿಶ್ವಕಪ್ಗಿಂತ ದ್ವಿಪಕ್ಷೀಯ ಸರಣಿ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ವರ್ಷದ ಕೊನೆಗೆ ಆಸ್ಟ್ರೇಲಿಯಾದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಟೀಂ ಇಂಡಿಯಾ ತೆರಳಲಿದೆ. ಈ ಸರಣಿಗಳನ್ನು ಆಯೋಜನೆ ಮಾಡುವುದರಿಂದ ಹಣಕಾಸಿನ ವ್ಯವಸ್ಥೆಯನ್ನು ಸರಿದೂಗಿಸಿಕೊಳ್ಳುವ ಇರಾದೆಯಲ್ಲಿದೆ ಎಂಬ ಮಾಹಿತಿ ಇದೆ.
ವಿಶ್ವಕಪ್ ಮುಂದೂಡುವ ಸಾಧ್ಯತೆಯಿರುವುದರಿಂದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ಗೆ ಬಹುತೇಕ ಗ್ರೀನ್ ಸಿಗ್ನಲ್ ಸಿಕ್ಕಿದಂತಾಗಿದೆ. ಆದರೆ ಭಾರತದಲ್ಲೂ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವೇಳೆ ಅಕ್ಟೋಬರ್ವರೆಗೆ ಪರಿಸ್ಥಿತಿ ಹತೋಟಿಗೆ ಬಂದು ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಐಪಿಎಲ್ ನಡೆಯುವ ಸಾಧ್ಯತೆಯಿದೆ.