ಲಾಹೋರ್ :ಪಾಕಿಸ್ತಾನ ತಂಡ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದೆ. ಆದರೆ, ಕ್ರೀಡೆಯ ಬಹುಮುಖ್ಯ ಅಂಗವಾಗಿದ್ದ ಅಭಿಮಾನಿಗಳ ಅನುಪಸ್ಥಿತಿಯಲ್ಲಿ ಈ ಟೂರ್ನಿ ನಡೆಯುತ್ತಿದೆ.
ಆದರೆ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕ್ರಿಕೆಟಿಗರ ಮತ್ತು ಅವರ ಅಭಿಮಾನಿಗಳ ಬಾಂಧವ್ಯ ದೂರವಾಗದಂತೆ ನೋಡಿಕೊಳ್ಳಲು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ಏರ್ಪಡಿಸಿತ್ತು. ಇಂದು ಬಾಬರ್ ಅಜಮ್ ಮತ್ತು ಅವರ 8 ವರ್ಷದ ಅಭಿಮಾನಿ ಸಾಮಿಯಾ ಅಫ್ಸರ್ರ ಜೊತೆ ಮಾತನಾಡಿಸಿದ್ದರು.
8 ವರ್ಷದ ಹುಡುಗಿ ಸಮಿಯಾ ಈ ವಯಸ್ಸಿಗೆ ಕ್ರಿಕೆಟ್ನ ಅದ್ಭುತ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಅವಳು ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಶ್ರೀಲಂಕಾದ ಲೆಜೆಂಡ್ ಕುಮಾರ್ ಸಂಗಕ್ಕಾರ ಕೂಡ," ಈ ಪುಟ್ಟ ಹುಡುಗಿ ಎಂತಹ ಒಳ್ಳೆಯ ಆಟಗಾರ್ತಿ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಚಿಕ್ಕ ವಯಸ್ಸಿಗೆ ಬ್ಯಾಟಿಂಗ್ ತಂತ್ರಗಾರಿಕೆಯನ್ನ ಮೈಗೂಡಿಸಿಕೊಂಡಿದ್ದಾಳೆ. ಇಂತಹ ಒಳ್ಳೆಯ ಸಾಮರ್ಥ್ಯವುಳ್ಳವರಿಗೆ ಕ್ರಿಕೆಟ್ನಲ್ಲಿ ಪ್ರೋತ್ಸಾಹ ನೀಡಬೇಕು" ಎಂದು ತಿಳಿಸಿದ್ದರು.
ಇನ್ನು, ವಿಡಿಯೋ ಕಾನ್ಫರೆನ್ಸ್ ವೇಳೆ ಸಾಮಿಯಾಗೆ ಬಾಬರ್ ಅಜಮ್ ಕೆಲವು ಬ್ಯಾಟಿಂಗ್ ಟಿಪ್ಸ್ಗಳನ್ನು ಹೇಳಿಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಚಿತ್ರವನ್ನು ಬಿಡಿಸಿರುವುದನ್ನು ನೋಡಿ ಫಿದಾ ಆಗಿರುವ ಅವರು ತಾವೂ ಅಲ್ಲಿಂದಲೇ ಅಥವಾ ಪಾಕಿಸ್ತಾನಕ್ಕೆ ಹಿಂದಿರುಗಿದ ಮೇಲೆ ತಮ್ಮ ಸಹಿಯಿರುವ ಜರ್ಸಿಯನ್ನು ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ.
ಈ ವಿಡಿಯೋ ಕಾನ್ಫರೆನ್ಸ್ ನಂತರ ಮಾತನಾಡಿರುವ ಸಾಮಿಯಾ, ನಾನು ಬಾಬರ್ ಅಜಮ್ರ ದೊಡ್ಡ ಅಭಿಮಾನಿ, ನಾನು ಕೂಡ ಅವರಂತೆಯೇ ಆಗಬೇಕು. ಅವರಂತೆ ದೇಶದ ಸೂಪರ್ ಹೀರೊ ಎನಿಸಿಕೊಳ್ಳಬೇಕು. ತಂಡ ಸಂಕಷ್ಟದಲ್ಲಿದ್ದಾಗ ನೆರವಾಗಬೇಕು. ಬಾಬರ್ ಪುರುಷ ತಂಡದಲ್ಲಿ ಏನು ಸಾಧನೆ ಮಾಡಿದ್ದಾರೋ ಅದೇ ರೀತಿ ಮುಂದೊಂದು ದಿನ ನಾನು ಪಾಕಿಸ್ತಾನ ಮಹಿಳಾ ತಂಡದಲ್ಲಿ ಮಾಡುತ್ತೇನೆ ಎಂದಿದ್ದಾರೆ.
ಅಭಿಮಾನಿಗಳು ಆಟದಲ್ಲಿ ಅವಿಭಾಜ್ಯ ಅಂಗವಾಗಿರುತ್ತಾರೆ ಮತ್ತು ನಮ್ಮನ್ನು ಪ್ರೇರೇಪಿಸುತ್ತಾರೆ. ಅಂತಹ ವ್ಯಕ್ತಿಗಳು ನಮ್ಮ ಹಿಂದೆ ಇದ್ದಾರೆ ಎಂದು ನಮಗೆ ತಿಳಿದಾಗ ಪಂದ್ಯದಲ್ಲಿ ಗೆಲ್ಲಲು ನಮಗೆ ಹೆಚ್ಚಿನ ಪ್ರೇರಣೆ ಸಿಗುತ್ತದೆ ಎಂದು ಪಾಕ್ ತಂಡದ ಸೀಮಿತ ಓವರ್ಗಳ ನಾಯಕ ಬಾಬರ್ ಅಜಮ್ ತಿಳಿಸಿದ್ದಾರೆ.
ಸಾಮಿಯಾಳನ್ನು ಭೇಟಿ ಮಾಡಿದ್ದು ನನಗೆ ಖುಷಿಯಾಗಿದೆ. ಅವಳೊಬ್ಬ ಸೂಪರ್ ಸ್ಟಾರ್. ಅವಳ ಬ್ಯಾಟಿಂಗ್ ವಿಡಿಯೋಗಳನ್ನು ಮೊದಲು ನೋಡಿದಾಗ ಆಶ್ಚರ್ಯಕ್ಕೊಳಗಾಗಿದ್ದೆ. ಅವರು ಬ್ಯಾಟಿಂಗ್ ಮಾಡುವಾಗ ತೆಗೆದುಕೊಳ್ಳುವ ಟೈಮಿಂಗ್, ಶಾಟ್ ಸೆಲೆಕ್ಷನ್ ನಂಬಲಸಾಧ್ಯವಾಗಿದೆ. ಅವಳು ಭವಿಷ್ಯದಲ್ಲಿ ಅದ್ಭುತ ಬ್ಯಾಟರ್ ಆಗಲಿದ್ದಾಳೆ. ನಾನು ಕೋವಿಡ್-19 ಪರಿಸ್ಥಿತಿ ಸರಿಯಾದ ಮೇಲೆ ಅವಳನ್ನು ಭೇಟಿ ಮಾಡಿಲಿದ್ದೇನೆ ಎಂದು ಬಾಬರ್ ತಿಳಿಸಿದ್ದಾರೆ.