ನವದೆಹಲಿ:ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಕೇಂದ್ರ ಸರ್ಕಾರ 21 ದಿನಗಳ ಕಾಲ ಇಡೀ ದೇಶವನ್ನೇ ಲಾಕ್ಡೌನ್ ಮಾಡಿ ಆದೇಶ ಹೊರಹಾಕಿದೆ. ತುರ್ತು ಅಗತ್ಯ ಹೊರತುಪಡಿಸಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದಂತೆ ಈಗಾಗಲೇ ಸೂಚನೆ ನೀಡಲಾಗಿದ್ರೂ ಕೆಲ ಪ್ರದೇಶಗಳಲ್ಲಿ ಜನರು ಈ ಆದೇಶ ಪಾಲನೆ ಮಾಡುತ್ತಿಲ್ಲ.
ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ವಿಡಿಯೋವೊಂದನ್ನು ಶೇರ್ ಮಾಡಿದ್ದು, ದೇಶದ ಜನರ ವರ್ತನೆ ಬದಲಾಗುವುದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಮನೆಯಿಂದ ಹೊರಗಡೆ ಬಂದವರನ್ನ ಪ್ರಶ್ನೆ ಮಾಡಿದ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಇದಾಗಿದ್ದು, ಓರ್ವ ಪೊಲೀಸ್ ಮೇಲೆ ವ್ಯಕ್ತಿಯೋರ್ವ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ.
ಇದೇ ವಿಡಿಯೋ ಶೇರ್ ಮಾಡಿರುವ ಹರ್ಭಜನ್ ಸಿಂಗ್ ನಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಯಾವಾಗ... ಪೊಲೀಸರ ಬಗೆಗಿನ ಮನೋಭಾವ ಚೇಂಜ್ ಆಗಬೇಕಾಗಿದೆ. ನಮ್ಮ ಪ್ರಾಣ ಉಳಿಸಲು ಅವರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂಬುದನ್ನ ಮರೆಯಬೇಡಿ.ಅವರಿಗೂ ಕುಟುಂಬಗಳಿವೆ. ಆದರೆ ರಾಷ್ಟ್ರಕ್ಕಾಗಿ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಉತ್ತಮ ನಾಳೆಗಾಗಿ ಒಮ್ಮೆ ಯೋಚನೆ ಮಾಡಿ, ಸಂವೇದನಾಶೀಲರಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 14ರವರೆಗೆ ದೇಶ ಲಾಕ್ಡೌನ್ ಮಾಡಿ ಆದೇಶ ಹೊರಡಿಸಲಾಗಿದ್ದು, ತುರ್ತು ಸಂದರ್ಭ, ಅಗತ್ಯ ವಸ್ತುಗಳ ಖರೀದಿ ಇದ್ದಾಗ ಮಾತ್ರ ಮನೆಯಿಂದ ಹೊರಗಡೆ ಬರುವಂತೆ ಆದೇಶ ನೀಡಲಾಗಿದೆ. ಇಷ್ಟಾದರೂ ಕೆಲವೊಂದು ಪ್ರದೇಶಗಳಲ್ಲಿ ಜನರು ಸರ್ಕಾರದ ಆದೇಶ ಮೀರಿ ಹೊರಬೀಳುತ್ತಿದ್ದು, ಅವರಿಗೆ ಪೊಲೀಸರು ಬೆತ್ತದ ರುಚಿ ತೋರಿಸುತ್ತಿದ್ದಾರೆ. ಇಷ್ಟಾದರೂ ಕೆಲವೊಂದು ಪ್ರದೇಶಗಳಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ವರದಿಯಾಗುತ್ತಿವೆ. ನಿನ್ನೆ ಬೆಂಗಳೂರಿನಲ್ಲಿ ಈ ಹಲ್ಲೆ ನಡೆದಿತ್ತು ಎಂಬುದನ್ನು ನಾವು ಗಮನಿಸಬಹುದಾಗಿದೆ.