ನವದೆಹಲಿ:ಧೋನಿಯ ನಾಯಕತ್ವದ ಯಶಸ್ಸಿನ ಬಗ್ಗೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ.
ಟೀಂ ಇಂಡಿಯಾವನ್ನು ಮೂರು ಪಾರ್ಮೆಟ್‌ನ ಕ್ರಿಕೆಟ್‌ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿಸಿದವರ ಸಾಲಿನಲ್ಲಿ ಧೋನಿ ಮೊದಲಿಗರು. 28 ವರ್ಷಗಳ ನಂತರ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಗಂಭೀರ್ ಹೇಳಿದ್ದಾರೆ.
ಧೋನಿ ಅತ್ಯುತ್ತಮ ನಾಯಕ. ಸೌತ್ ಆಫ್ರಿಕಾದಲ್ಲಿ ನಡೆದ ಮೊದಲ ಟಿ-20 ವಿಶ್ವಕಪ್‌ನಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿ ದೇಶಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಭಾರತ ತಂಡ 2007ರಲ್ಲಿ ಐಸಿಸಿ ಟಿ-20 ವರ್ಲ್ಡ್ ಕಪ್ ಗೆಲ್ಲುತ್ತಿದ್ದಂತೆ, ಧೋನಿ ನಾಯಕತ್ವದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ನಂತರದ ದಿನಗಳಲ್ಲಿ ಭಾರತ ತಂಡದ ನಾಯಕನಾಗಿ ಧೋನಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 28 ವರ್ಷಗಳ ಬಳಿಕ 2011ರ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಭಾರತ ತಂಡವನ್ನು ಅವರು ಮುನ್ನಡೆಸಿದ್ದರು.
ನಿಜಕ್ಕೂ ಧೋನಿ ಅದೃಷ್ಠದ ನಾಯಕ. ಏಕೆಂದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತ ಆಟಗಾರರನ್ನೊಳಗೊಂಡ ತಂಡ ಸಿಕ್ಕಿತ್ತು, ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಜಹೀರ್, ಯುವರಾಜ್ ಸಿಂಗ್, ನಾನು, ಯೂಸುಫ್ ಹಾಗು ವಿರಾಟ್ ಸೇರಿದಂತೆ ಹಲವು ಪ್ರತಿಭಾವಂತ ಆಟಗಾರರು 2011ರ ವಿಶ್ವಕಪ್ ಭಾರತ ತಂಡದಲ್ಲಿ ಇದ್ದುದ್ದರಿಂದ ಧೋನಿ ತಂಡವನ್ನು ಸುಲಭವಾಗಿ ಮುನ್ನಡೆಸಿದರು. ಜತೆಗೆ ತಂಡವೂ ಬಲಿಷ್ಠವಾಗಿತ್ತು. ಈ ತಂಡವನ್ನು ಕಟ್ಟುವುದಕ್ಕೆ ಸೌರವ್ ಗಂಗೂಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಇದರ ಫಲವನ್ನು ಧೋನಿ ಅನುಭವಿಸಿದರು ಎಂದು ಗೌತಮ್ ಗಂಭೀರ್ ಹೇಳಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿಯ ಯಶಸ್ಸಿನ ಹಿಂದೆ ಜಹೀರ್ ಖಾನ್ ಅವರ ಪರಿಶ್ರಮವೂ ದೊಡ್ಡದಿದೆ. ಜಹೀರ್ ಖಾನ್ ವಿಶ್ವ ದರ್ಜೆಯ ಬೌಲರ್, ಜಹೀರ್ ಖಾನ್ ಅವರನ್ನು ಬೆಳೆಸುವಲ್ಲಿ ಸೌರವ್ ಗಂಗೂಲಿ ಮುಖ್ಯಪಾತ್ರ ವಹಿಸಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.
ಧೋನಿಯ ಟೆಸ್ಟ್ ಕ್ರಿಕೆಟ್ ಯಶಸ್ಸು ಸಾಧಿಸಲು ಜಹೀರ್ ಖಾನ್ ಮುಖ್ಯ ಕಾರಣ. ಧೋನಿಗೆ ಜಹೀರ್ ಸಿಕ್ಕಿದ್ದು ಅದೃಷ್ಠ. ಹಾಗೂ ಇದರ ಶ್ರೇಯ ಮಾಜಿ ನಾಯಕ ಸೌರವ್ ಗಂಗೂಲಿಗೆ ಸಲ್ಲಬೇಕು. ನನ್ನ ಪ್ರಕಾರ ಜಹೀರ್ ಖಾನ್ ವಿಶ್ವ ದರ್ಜೆಯ ಭಾರತದ ಬೌಲರ್ ಎಂದು ಗೌತಮ್ ಗಂಭೀರ್ ಬಣ್ಣಿಸಿದ್ದಾರೆ.