ಮುಂಬೈ: ಕಳೆದು ಒಂದು ವರ್ಷದಿಂದ ಭಾರತ ತಂಡದ ಸೀಮಿತ ಓವರ್ಗಳ ಪಂದ್ಯದಿಂದ ಅವಕಾಶ ಕಳೆದುಕೊಂಡಿದ್ದ ಕನ್ನಡಿಗ ಮನೀಷ್ ಪಾಂಡೆ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮನೀಷ್ ಪಾಂಡೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತ ಎ ತಂಡದ ಪರ ಆಡುತ್ತಿದ್ದಾರೆ. ನಾಯಕನಾಗಿ ಹಾಗೂ ಬ್ಯಾಟ್ಸ್ಮನ್ ಆಗಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಕಳೆದ ವರ್ಷ ನ್ಯೂಜಿಲ್ಯಾಂಡ್ ಎ ವಿರುದ್ಧ ನ್ಯೂಜಿಲ್ಯಾಂಡ್ನಲ್ಲಿ ಸರಣಿ ಜಯ, ಆಸ್ಟ್ರೇಲಿಯಾ ಎ, ದಕ್ಷಿಣ ಆಫ್ರಿಕಾ ಎ ತಂಡಗಳನ್ನೊಳಗೊಂಡ ಚತುಷ್ಕೋನ ಏಕದಿನ ಸರಣಿ ಹಾಗೂ ಇದೀಗ ವಿಂಡೀಸ್ ಎ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಮನೀಷ್ ಭಾರತ ಎ ತಂಡದ ಪರ ಆಡಿದ ಎಲ್ಲಾ ಸರಣಿಯಲ್ಲೂ ಒಂದಾದರೂ ಶತಕ ದಾಖಲಿಸುತ್ತಿದ್ದಾರೆ. ಜೊತೆಗೆ ಕಳೆದ ಐಪಿಎಲ್ನಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿರುವ ಪಾಂಡೆ 4ನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರ ಎಂಬುವುದರಲ್ಲಿ ಎರಡು ಮಾತಿಲ್ಲ.
ಪಾಂಡೆ ಲಿಸ್ಟ್ ಎ ಕ್ರಿಕೆಟ್ನಲ್ಲಿ 4504 ರನ್ಗಳಿಸಿದ್ದು, ಇದರಲ್ಲಿ 9 ಶತಕ 29 ಅರ್ಧಶತಕ ಸೇರಿದೆ. ಇವರ ಬ್ಯಾಟಿಂಗ್ ಸರಾಸರಿ 43,31 ಇದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವಕಾಶ ಸಿಕ್ಕಿದ್ದು ಮಾತ್ರ 3 ವರ್ಷಗಳಲ್ಲಿ 23 ಪಂದ್ಯದಲ್ಲಿ ಮಾತ್ರ. ಅದರಲ್ಲಿ ಬ್ಯಾಟಿಂಗ್ ಸಿಕ್ಕಿದ್ದು 18 ಇನ್ನಿಂಗ್ಸ್ನಲ್ಲಿ. ದುರಂತವೆಂದರೆ ಇದರಲ್ಲೂ ಇನ್ನಿಂಗ್ಸ್ ಮುಕ್ತಾಯದ ಕೊನೆಯಲ್ಲಿ ಮನೀಷ್ಗೆ ಬ್ಯಾಟಿಂಗ್ ಬಂದಿರುವುದೇ ಹೆಚ್ಚು.
ಇದೀಗ ಮತ್ತೊಂದು ಅವಕಾಶ ಸಿಕ್ಕಿದ್ದು, ಭಾರತ ತಂಡಕ್ಕೆ ಎಡಬಿಡದೇ ಕಾಡುತ್ತಿರುವ ನಾಲ್ಕನೇ ಕ್ರಮಾಂಕಕ್ಕೆ ನಿಜಕ್ಕೂ ಮನೀಷ್ ಪಾಂಡೆ ನ್ಯಾಯಯುತ ಆಟಗಾರನಾಗಿದ್ದು, ಸಿಕ್ಕವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಏಕದಿನ ಕ್ರಿಕೆಟ್ನಲ್ಲಿ ಖಾಯಂ ಗಿಟ್ಟಿಸಿಕೊಳ್ಳಬೇಕೆಂಬುದು ಕನ್ನಡಿಗರ ಆಶಯವಾಗಿದೆ.