ನವದೆಹಲಿ:ಎಲ್ಲಾ ವಿಶ್ವಕಪ್‌ಗಳ ಗೆಲುವಿಗಿಂತ ಕೊರೊನಾ ವಿರುದ್ಧದ ಗೆಲುವು ಅತಿ ಮುಖ್ಯವಾಗಿದ್ದು, ಈ ಹೋರಾಟ ಎಲ್ಲಾ ವಿಶ್ವಕಪ್‌ಗಳ ತಾಯಿಯಂತೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರವಿಶಾಸ್ತ್ರಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕ್ರೀಡೆಗಳಿಂದಲೂ ಪಾಠ ಕಲಿಯಿರಿ ಎಂದಿದ್ದಾರೆ. ಕೊರೊನಾ ವಿರುದ್ಧದ ಹೋರಾಟ ವಿಶ್ವಕಪ್ ಅನ್ನು ಬೆನ್ನಟ್ಟುವಂತಿದೆ. ಇಲ್ಲಿ ನೀವು ಜಯ ಗಳಿಸಬೇಕಾದರೆ ಸಾಕಷ್ಟು ಪ್ರಯತ್ನ ಮಾಡಬೇಕಿದೆ ಎಂದಿದ್ದಾರೆ.
ಇದು ಸಾಮಾನ್ಯ ವಿಶ್ವಕಪ್ ಅಲ್ಲ, ಇದು ಎಲ್ಲಾ ವಿಶ್ವಕಪ್‌ಗಳ ತಾಯಿ, ಇಲ್ಲಿ ಕೇವಲ 11 ಜನರು ಆಡುತ್ತಿಲ್ಲ. ಬದಲಾಗಿ 1.4 ಶತಕೋಟಿ ಜನರು ಆಟದ ಮೈದಾನದಲ್ಲಿದ್ದಾರೆ ಎಂದು ರವಿಶಾಸ್ತ್ರಿ ಮಾರ್ಮಿಕವಾಗಿ ಹೇಳಿದ್ದಾರೆ.
ನೀವು ಮೇಲಿನಿಂದ ಬರುವ ಆದೇಶಗಳನ್ನು ಪಾಲಿಸಬೇಕು, ಅದು ಕೇಂದ್ರವಾಗಿರಲಿ, ರಾಜ್ಯವಾಗಲಿ ಅಥವಾ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಜನರಿಂದ ಆಗಿರಲಿ. ಮನೆಯಲ್ಲಿರುವುದು ಮತ್ತು ಸಾಮಾಜಿಕ ಅಂತರದ ನಿಯಮ ಪಾಲನೆಯಿಂದ ಈ ಹೋರಾಟದಲ್ಲಿ ವಿಜಯ ಸಾಧಿಸಬಹುದು ಎಂದಿದ್ದಾರೆ ರವಿಶಾಸ್ತ್ರಿ.
1.4 ಶತಕೋಟಿ ಜನರೆಲ್ಲ ಒಟ್ಟಾಗಿ ಹೋರಾಡಿ ಕೊರೊನಾವನ್ನು ಸೋಲಿಸೋಣ. ಈ ಮೂಲಕ ಮಾನವೀಯತೆ ಎಂಬ ವಿಶ್ವಕಪ್ ಗೆಲ್ಲೋಣ ಎಂದು ಟೀಂ ಇಂಡಿಯಾ ಕೋಚ್ ಕರೆ ನೀಡಿದ್ದಾರೆ.