ಲಂಡನ್: ಕೋವಿಡ್-19 ಹೋರಾಟಕ್ಕಾಗಿ ಇಂಗ್ಲೆಂಡ್ ಕ್ರಿಕೆಟಿಗರು ತಮ್ಮ ವೇತನವನ್ನು ತಾವಾಗಿಯೇ ಕಡಿತಗೊಳಿಸಿಕೊಂಡು, 5,00,000 ಪೌಂಡ್ಸ್(4.68ಕೋಟಿ ರೂ.) ಮೊತ್ತವನ್ನು ದೇಣಿಗೆ ನೀಡುವ ಮೂಲಕ ವಿಶ್ವ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.
ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವಿರುದ್ಧದ ಹೊರಾಟಕ್ಕಾಗಿ ತಮ್ಮ ವೇತನ ಮೊತ್ತವನ್ನು ಸ್ವ ಇಚ್ಛೆಯಿಂದ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.
ಇಂಗ್ಲೆಂಡ್ ಮತ್ತು ವೇ;ಲ್ಸ್ ಕ್ರಿಕೆಟ್ ಮಂಡಳಿಯು ಆಟಗಾರರ ಸಂಬಳದಲ್ಲಿ 20 ರಷ್ಟು ಕಡಿತ ಮಾಡಲು ಪ್ರಸ್ತಾಪಿಸಿತ್ತು. ಅಲ್ಲದೇ ಕ್ರಿಕೆಟಿಗರ ಸಂಘದ ಪ್ರತಿನಿಧಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿತ್ತು.
ಇದೀಗ ಪುರುಷರ ಕ್ರಿಕೆಟಿಗರ ಶೇ 20 ರಷ್ಟು ಅಂದರೆ 5ಲಕ್ಷ ಪೌಂಡ್ ಮೊತ್ತವನ್ನು ಹಾಗೂ ಮಹಿಳಾ ಕ್ರಿಕೆಟಿಗರ ಏಪ್ರಿಲ್, ಮೇ ಮತ್ತು ಜೂನ್ ವೇತನವನ್ನು ಸ್ವಯಂಪ್ರೇರಿತರಾಗಿ ನೀಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಜೊತೆ ನಡೆದ ಸಭೆಯಲ್ಲಿ ಎಲ್ಲ ಆಟಗಾರರು 0.5 ಮಿಲಿಯನ್ ಪೌಂಡ್ಸ್ ಮೊತ್ತವನ್ನು ನೀಡಲು ಒಪ್ಪಿಕೊಂಡಿದ್ದಾರೆ.
ಈಗಾಗಲೆ ಕೆಲವು ಇಂಗ್ಲೆಂಡ್ ಕ್ರಿಕೆಟಿಗರು ವೈಯಕ್ತಿಕವಾಗಿ ಕೊರೊನಾ ವೈರಸ್ ತಡೆಗಾಗಿ ತಮ್ಮ ಕೈಲಾದಷ್ಟು ನೆರವು ನೀಡಿದ್ದಾರೆ. ವಿಕೆಟ್ ಕೀಪರ್ ಜೋಸ್ ಬಟ್ಲರ್ 2019ರ ವಿಶ್ವಕಪ್ ಫೈನಲ್ನಲ್ಲಿ ತೊಟ್ಟಿದ್ದ ಜರ್ಸಿಯನ್ನು ಹರಾಜಿಗಿಟ್ಟು ಬಂದ ಹಣವನ್ನು ನೀಡಿದ್ದರೆ, ಮಹಿಳಾ ತಂಡದ ನಾಯಕಿ ಹೀದರ್ ನೈಟ್ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.