ಸಿಡ್ನಿ: ದೇಶಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್ಡೌನ್ ವೇಳೆ ಹೆಚ್ಚು ಪ್ರಾಮುಖ್ಯತೆ ಪಡೆದ ಪಂದ್ಯಗಳನ್ನು ಫಿನಿಶಿಂಗ್ ಮಾಡುವ ಪಾಂಡಿತ್ಯದ ಮೇಲೆ ಸಾಕಷ್ಟು ಶ್ರಮವಹಿಸಿದ್ದೇನೆ ಎಂದು ಸ್ಫೋಟಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ದ 2ನೇ ಟಿ20 ಪಂದ್ಯದ ವೇಳೆ ಕೊನೆಯ 12 ಎಸೆತಗಳಲ್ಲಿ 25 ರನ್ ಸೇರಿದಂತೆ ಒಟ್ಟಾರೆ 22 ಎಸೆತಗಳಲ್ಲಿ 42 ರನ್ ಸಿಡಿಸಿರುವ ಪಾಂಡ್ಯ ಭಾರತಕ್ಕೆ 6 ವಿಕೆಟ್ಗಳ ಗೆಲುವು ತಂದುಕೊಟ್ಟರು. ಶಸ್ತ್ರಚಿಕಿತ್ಸೆ ಹಾಗೂ ಕೊರೊನಾ ಲಾಕ್ಡೌನ್ನ ಸುದೀರ್ಘ ವಿರಾಮದ ನಂತರ ಕ್ರಿಕೆಟ್ಗೆ ಮರಳಿರುವ ಅವರು, ಈ ಬಿಡುವಿನ ವೇಳೆ ಗೇಮ್ ಫಿನಿಶಿಂಗ್ ಮಾಡುವುದರ ಮೇಲೆ ಹೆಚ್ಚು ಅಭ್ಯಾಸ ಮಾಡಿರುವುದಾಗಿ ಹೇಳಿದ್ದಾರೆ.
"ನಾನು ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಿದ್ದೇನೆಯೇ ಅಥವಾ ಇಲ್ಲವೋ ಎಂಬುದು ಮುಖ್ಯವಲ್ಲ, ಪಂದ್ಯವನ್ನು ಫಿನಿಶ್ ಮಾಡುವುದು ಮುಖ್ಯ" ಎಂದು ಪಂದ್ಯದ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಪಾಂಡ್ಯ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯರನ್ನು ಅಭಿನಂದಿಸುತ್ತಿರುವ ವಿರಾಟ್ ಕೊಹ್ಲಿ "ನಾನು ಇಂತಹ ಪರಿಸ್ಥಿತಿಗಳನ್ನು ಹಲವು ಬಾರಿ ಎದುರಿಸಿದ್ದೇನೆ. ಅಂದು ಮಾಡಿದ ತಪ್ಪುಗಳಿಂದ ಸಾಕಷ್ಟು ಕಲಿತಿದ್ದೇನೆ. ನನ್ನ ಆಟ ಯಾವಾಗಲೂ ನನ್ನ ಆತ್ಮವಿಶ್ವಾಸದ ಸುತ್ತ ಇರುತ್ತದೆ. ನನ್ನ ಮೇಲೆ ನಂಬಿಕೆಯಿಟ್ಟಿರುತ್ತೇನೆ. ಆದರೆ ಅತಿಯಾದ ಆತ್ಮವಿಶ್ವಾಸವನ್ನು ಎಂದಿಗೂ ಹೊಂದುವುದಿಲ್ಲ" ಎಂದಿದ್ದಾರೆ.
ಓದಿ: ಪಾಂಡ್ಯ ಗೇಮ್ ಫಿನಿಶಿಂಗ್ನಲ್ಲಿ ಧೋನಿ ದಾರಿಯಲ್ಲೇ ಸಾಗುತ್ತಿದ್ದಾರೆ: ಆಸ್ಟ್ರೇಲಿಯಾ ಕೋಚ್
"ಇಂತಹ ಚೇಸಿಂಗ್ ವೇಳೆ ಎದುರಾಳಿ ಏನು ಮಾಡುತ್ತಿದ್ದಾರೆ ಎಂದು ಆಲೋಚನೆ ಮಾಡುವುದಕ್ಕಿಂತ, ನಾನು ಏನು ಮಾಡಬಹುದು ಎಂದು ಆಲೋಚಿಸಬೇಕು. ಇದು ಕೇವಲ (ಕೊನೆಯ ಓವರ್‌ನಲ್ಲಿ 2 ಸಿಕ್ಸರ್ ಸಿಡಿಸಿದ ಬಗ್ಗೆ) ಎರಡು ದೊಡ್ಡ ಹೊಡೆತಗಳ ವಿಷಯವಾಗಿದೆ. ನಾನು ಯಾವಾಗಲೂ ನನ್ನನ್ನು ಬೆಂಬಲಿಸುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಗಟ್ಟಿಯಾಗಿ ನಿಂತು ಆಡಲು ಇಚ್ಚಿಸುತ್ತೇನೆ. ತಂಡಕ್ಕೆ ನನ್ನಿಂದ ಏನೇ ಅಗತ್ಯವಿದ್ದರೂ ಅದನ್ನು ಮಾಡಲು ಪ್ರಯತ್ನಿಸುತ್ತೇನೆ. ಸ್ಕೋರ್ ಬೋರ್ಡ್ನ ಕಡೆ ನೋಡಿ ಆಡುವುದಕ್ಕೆ ಇಷ್ಟಪಡುತ್ತೇನೆ. ಈ ಸಂದರ್ಭದಲ್ಲಿ ಯಾವ ಬೌಲರ್ ಟಾರ್ಗೆಟ್ ಮಾಡಬೇಕೆಂದು ನನಗೆ ತಿಳಿದಿರುತ್ತದೆ" ಎಂದು ಪಾಂಡ್ಯ ಹೇಳಿದ್ದಾರೆ.
'70 ರನ್ನುಗಳನ್ನು 12 ಎಸೆತಗಳಲ್ಲಿ ಮುಗಿಸೋಕೆ ಯೋಚಿಸುವೆ'
"ಟಿ20 ಕ್ರಿಕೆಟ್ನಲ್ಲಿ ನಿಮಗೆ ಆಲೋಚಿಸಲು ಸಾಕಷ್ಟು ಸಮಯವಿರುತ್ತದೆ. 30 ಎಸೆತಗಳಲ್ಲಿ 70- 80 ರನ್ಗಳ ಅಗತ್ಯವಿದೆ ಎಂದರೆ, ನಾನು ಅದನ್ನು ಕೇವಲ 12 ಎಸೆತಗಳಲ್ಲಿ ಮುಗಿಸಲು ನೋಡುತ್ತೇನೆ. ಕೊನೆಯ ಫಲಿತಾಂಶಕ್ಕಿಂತ ಮತ್ತು ಪಂದ್ಯವನ್ನು ಮುಗಿಸುವ ಪ್ರಕ್ರಿಯೆ ಕಡೆಗೆ ಹೆಚ್ಚು ಗಮನ ನೀಡುತ್ತೇನೆ" ಎಂದು ಅವರು ತಿಳಿಸಿದ್ದಾರೆ.
ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸದ 5 ಇನ್ನಿಂಗ್ಸ್ ಮೂಲಕ ಕ್ರಮವಾಗಿ 90, 28, 92, 16, 42 ರನ್ ಗಳಿಸಿದ್ದಾರೆ.