ಚೆನ್ನೈ:ಕೊರೊನಾದಿಂದಾಗಿಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಮುಂದೂಡಲ್ಪಟ್ಟಿದೆ. ಈ ವರ್ಷ ಟೂರ್ನಿ ನಡೆಯುವುದೇ ಸಂಶಯವೆಂದು ಹೇಳಲಾಗುತ್ತಿದೆ. ಹೀಗಾಗಿ ಧೋನಿ ತಂಡಕ್ಕೆ ಮತ್ತೊಮ್ಮೆ ಕಮ್ಬ್ಯಾಕ್ ಮಾಡುವುದು ಅನುಮಾನ ಮೂಡಿಸಿದೆ.
ಟೀಂ ಇಂಡಿಯಾದ ಕೆಲ ಆಟಗಾರರ ಕ್ರಿಕೆಟ್ ಭವಿಷ್ಯ ಈ ಬಾರಿಯ ಐಪಿಎಲ್ ಮೇಲೆ ನಿಂತಿತ್ತು. ಒಂದ್ವೇಳೆ ಟೂರ್ನಿ ನಡೆಯದೇ ಹೋದರೆ ಈ ಆಟಗಾರರ ಕ್ರಿಕೆಟ್ ಜೀವನ ಕೊರೊನಾ ಕರಿನೆರಳಲ್ಲಿ ಕಮರಿ ಹೋಗುವ ಆತಂಕ ಎದುರಾಗಿದೆ.
ಐಪಿಎಲ್‌ನಲ್ಲಿ ಭಾಗಿಯಾಗಲು ಭರ್ಜರಿ ತಾಲೀಮು ನಡೆಸಿದ್ದ ಧೋನಿ, ರೈನಾ ಟೀಂ ಇಂಡಿಯಾ ಸೇರಿಕೊಳ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಕನಸು ಕಾಣುತ್ತಿದ್ದರು.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಕೆ. ಶ್ರೀಕಾಂತ್, IPL ಟೂರ್ನಿ ನಡೆಯದಿದ್ದರೆ ಧೋನಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದು ಸಂಶಯ ಎಂದು ಹೇಳಿದ್ದಾರೆ.
ಐಪಿಎಲ್‌ನಲ್ಲಿ ಕ್ಯಾಪ್ಟನ್ ಕೂಲ್ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಸಮಿತಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇತ್ತು. ಆದರೆ ಟೂರ್ನಿ ಮುಂದೂಡಿಕೆಯಾಗಿದೆ. ಹಾಗಾಗಿ ತಂಡಕ್ಕೆ ಅವರ ಮರಳುವಿಕೆ ಸುಲಭವಾಗಿಲ್ಲ.
ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ನಲ್ಲಿ ಕಣಕ್ಕಿಳಿದ ಬಳಿಕ ಧೋನಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಈ ಸಲದ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ತಂಡಕ್ಕೆ ಬರುವ ಇರಾದೆ ಅವರದ್ದಾಗಿತ್ತು.
ಒಂದ್ವೇಳೆ ಇವರು ತಂಡದಿಂದ ಹೊರಬಿದ್ದಿದ್ದೇ ಆದಲ್ಲಿ ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ ತಂಡ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.