ಮೇಲ್ಬೋರ್ನ್: ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 297 ರನ್ಗಳ ಜಯ ಸಾಧಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿಯಿರುವಂತೆ ಟೆಸ್ಟ್ ಸರಣಿಯಲ್ಲಿ ಜಯ ಸಾಧಿಸಿದೆ.
ಮೇಲ್ಬೋರ್ನ್ನಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕಿವೀಸ್ಗೆ 488 ರನ್ಗಳ ಬೃಹತ್ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನೆತ್ತಿದ ವಿಲಿಯಮ್ಸನ್ ಪಡೆ ಆಸೀಸ್ ಬೌಲರ್ಗಳ ದಾಳಿಗೆ ಸಿಲುಕಿ 240 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಸೀಸ್ ವಿರುದ್ಧ 247 ರನ್ಗಳ ಪರಾಜಯ ಕಂಡಿದೆ.
488 ರನ್ಗಳ ಗುರಿ ಪಡೆದ ಕಿವೀಸ್ 35 ರನ್ ಆಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್ಮನ್ ಲ್ಯಾಥಮ್(8), ನಾಯಕ ವಿಲಿಯಮ್ಸನ್(0) ಹಾಗೂ ಹಿರಿಯ ಬ್ಯಾಟ್ಸ್ಮನ್ ರಾಸ್ ಟೇಲರ್(2) ವಿಕೆಟ್ ಕೆಳೆದುಕೊಂಡು ಆಘಾತ ಅನುಭವಿಸಿತು. ಈ ಮೂವರನ್ನು ಜೇಮ್ಸ್ ಪ್ಯಾಟಿನ್ಸನ್ ಪೆವಿಲಿಯನ್ಗಟ್ಟಿದರು.
ಆದರೆ ಟಾಮ್ ಬ್ಲಂಡೆಲ್(121) ಹೆನ್ರಿ ನಿಕೋಲ್ಸ್ ಜೊತೆ(33) ಸೇರಿ 54 ರನ್ಗಳ ಜೊತೆಯಾಟ ನೀಡಿದರು. ನಿಕೋಲ್ಸ್ 33 ರನ್ಗೆ ವಿಕೆಟ್ ಒಪ್ಪಿಸಿದ ನಂತರ ಬಂದ ವಿಕೆಟ್ ಕೀಪರ್ ವಾಟ್ಲಿಂಗ್ 22 ರನ್ , ಕಾಲಿನ್ ಗ್ರಾಂಡ್ಹೋಮ್(9), ಮಿಚೆಲ್ ಸ್ಯಾಂಟ್ನರ್(27) ಸ್ಪಿನ್ನರ್ ನಥನ್ ಲಿಯಾನ್ಗೆ ವಿಕೆಟ್ ಒಪ್ಪಿಸಿದರು.
ಟಿಮ್ ಸೌಥಿ 2 ರನ್ಗಳಿಸಿ ರನ್ಔಟ್ ಆದರು. 210 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ ಆಕರ್ಷಕ ಶತಕ ಸಿಡಿಸಿದ ಟಾಮ್ ಬ್ಲಂಡೆಲ್ 121 ರನ್ಗಳಿಸಿ ಲಾಬುಶೇನ್ಗೆ ವಿಕೆಟ್ ಒಪ್ಪಿಸಿದರು. ಟ್ರೆಂಟ್ ಬೌಲ್ಟ್ ಗಾಯಗೊಂಡಿದ್ದರಿಂದ ಬ್ಯಾಟಿಂಗ್ ಇಳಿಯಲಿಲ್ಲವಾದ್ದರಿಂ ಆಸ್ಟ್ರೇಲಿಯಾ ತಂಡ 247 ರನ್ಗಳ ಬೃಹತ್ ಜಯ ಸಾಧಿಸಿ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನು ಒಂದು ಪಂದ್ಯವಿರುವಂತೆಯೇ 2-0ಯಲ್ಲಿ ವಶಪಡಿಸಿಕೊಂಡಿತು.
ಆಸ್ಟ್ರೇಲಿಯಾ ಪರ ಮೊದಲ ಇನ್ನಿಂಗ್ಸ್ನಲ್ಲಿ ಆಕರ್ಷಕ ಶತಕ ಸಿಡಿಸಿದ ಟ್ರಾವಿಸ್ ಹೆಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಜನವರಿ 3 ರಿಂದ ಆರಂಭವಾಗಲಿದೆ.