ಸಿಡ್ನಿ: ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಅಶ್ಟನ್ ಅಗರ್ ಗಾಯಗೊಂಡು ಟಿ-20 ತಂಡದಿಂದ ಹೊರಬಿದ್ದಿರುವುದರಿಂದ ಅವರ ಸ್ಥಾನಕ್ಕೆ ಹಿರಿಯ ಸ್ಪಿನ್ನರ್ ನಥನ್ ಲಿಯಾನ್ ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಟೆಸ್ಟ್ ತಂಡದ ಅಗ್ರ ಸ್ಪಿನ್ನರ್ ಆಗಿರುವ ಲಿಯಾನ್ ಭಾನುವಾರ ನಡೆಯುವ 2ನೇ ಟಿ-20 ಪಂದ್ಯದಲ್ಲಿ ಆಸೀಸ್ ತಂಡ ಸೇರಿಕೊಳ್ಳಲಿದ್ದು, ಇವರು ಮಿಚೆಲ್ ಸ್ವೆಪ್ಸನ್ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.
ಈ ಕುರಿತು ಐಸಿಸಿ ಟ್ವೀಟ್ ಮಾಡಿದ್ದು, ಗಾಯಾಳು ಆಶ್ಟನ್ ಅಗರ್ ಟಿ-20 ಸರಣಿಯಿಂದ ಹೊರಬಿದ್ದಾರೆ, ಅವರ ಸ್ಥಾನಕ್ಕೆ ಬಲಗೈ ಸ್ಪಿನ್ನರ್ ನಥನ್ ಲಿಯಾನ್ ಆಸ್ಟ್ರೇಲಿಯಾ ತಂಡ ಸೇರಿಕೊಂಡಿದ್ದಾರೆ ಎಂದು ಐಸಿಸಿ ಟ್ವೀಟ್ ಮಾಡಿದೆ.
ಇನ್ನು ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಕ್ಯಾಮರೂನ್ ಗ್ರೀನ್ರನ್ನು ಭಾನುವಾರದಿಂದ ಭಾರತ ಎ ವಿರುದ್ಧ ನಡೆಯುವ ಟೆಸ್ಟ್ ಪಂದ್ಯಕ್ಕಾಗಿ ಬಿಡುಗಡೆ ಮಾಡಲಾಗಿದೆ. ಇನ್ನು ನಾಯಕ ಫಿಂಚ್ ಕೂಡ ಸ್ಕ್ಯಾನ್ಗೊಳಗಾಗಿದ್ದು, ಅದರ ವರದಿ ಬಂದ ನಂತರ ಎರಡನೇ ಪಂದ್ಯಕ್ಕೆ ಲಭ್ಯರಿರುವರೇ ಎಂಬುದು ಖಚಿತವಾಗಲಿದೆ.
ಇನ್ನು ಭಾರತ ತಂಡಕ್ಕೆ ಕ್ಯಾನ್ಬೆರಾದಲ್ಲಿ ನಡೆದಿದ್ದ ಕೊನೆಯ ಏಕದಿನ ಹಾಗೂ ಮೊದಲ ಟಿ-20 ಪಂದ್ಯದಲ್ಲಿ ಗೆಲ್ಲಲು ನೆರವಾಗಿದ್ದ ರವೀಂದ್ರ ಜಡೇಜಾ ಕೂಡ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ವೇಗಿ ಶಾರ್ದುಲ್ ಠಾಕೂರ್ ಸೇರ್ಪಡೆಗೊಂಡಿದ್ದಾರೆ.