ಸಿಡ್ನಿ:ಏಕದಿನ ಸರಣಿಯಲ್ಲಿ ಸಿಡ್ನಿ ಮೈದಾನದಲ್ಲಿ ಭಾರತದ ವಿರುದ್ಧ ಪ್ರಾಬಲ್ಯ ಸಾಧಿಸಿದ್ದ ಅತಿಥೇಯ ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಮಂಕಾಗಿದೆ. ಅನುಭವಿಗಳ ಕೊರತೆ ಒಂದು ಕಡೆಯಾದರೆ, ಭಾರತದ ಬ್ಯಾಟ್ಸ್ಮನ್ಗಳ ಎದುರು ಆಸೀಸ್ ಬೌಲರ್ಗಳು ದುರ್ಬಲರಾಗುತ್ತಿದ್ದಾರೆ. ಆದರೂ ಕೊನೆಯ ಪಂದ್ಯವನ್ನು ಗೆದ್ದು ವೈಟ್ವಾಷ್ನಿಂದ ತಪ್ಪಿಸಿಕೊಳ್ಳಲು ಬಯಸಿದೆ,
ಭಾರತ ತಂಡ ಕಳೆದ ಸತತ 9 ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದ್ದು, ಇಂದಿನ ಪಂದ್ಯದಲ್ಲೂ ತನ್ನ ಅಜೇಯ ಓಟವನ್ನು ಮುಂದುವರಿಸುವ ಇರಾದೆಯಲ್ಲಿದೆ. ಈಗಾಗಲೆ ತಂಡದ ಆರಂಭಿಕರಾದ ಕೆಎಲ್ ರಾಹುಲ್, ಶಿಖರ್ ಧವನ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ರಾಹುಲ್ ಮೊದಲ ಪಂದ್ಯದಲ್ಲಿ, ಧವನ್ 2ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಇನ್ನು ನಾಯಕ ಕೊಹ್ಲಿ ಲಯ ಕಂಡುಕೊಂಡಿದ್ದಾರೆ, ಇವರಿಗೆ ಶ್ರೇಯಸ್ ಮತ್ತು ಸಾಮ್ಸನ್ ನೆರವು ನೀಡಿದರೆ ತಂಡ ಬೃಹತ್ ಮೊತ್ತ ದಾಖಲಿಸುವುದರಲ್ಲಿ ಎರಡು ಮಾತಿಲ್ಲ.
ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಸ್ಥಿರತೆಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಏಕದಿನ ಸರಣಿಯಲ್ಲಿ 90, 28, 92 ರನ್ಗಳಿಸಿದರೆ, ಟಿ20 ಯಲ್ಲಿ 16 ಹಾಗೂ 42 ರನ್ಗಳಿಸಿ ತಂಡದ ಫಿನಿಶಿಂಗ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದರಿಂದ ಭಾರತ ತಂಡ ಕ್ಲೀನ್ ಸ್ವೀಪ್ ಕನಸನ್ನು ನನಸು ಮಾಡಲು ಕಾಯುತ್ತಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ನಟರಾಜನ್ ಹಾಗೂ ಶಾರ್ದುಲ್ ಠಾಕೂರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಚಹಾಲ್ ಕಳೆದ ಪಂದ್ಯದಲ್ಲಿ ದುಬಾರಿಯಾಗಿರುವುದು ಭಾರತ ತಂಡ ಏಕೈಕ ಹಿನ್ನಡೆಯಾಗಿದೆ. ಏಕೆಂದರೆ ಅವರನ್ನು ಹೊರೆತು ಪಡಿಸಿದರೆ ತಂಡದಲ್ಲಿ ಬೇರೆ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದಿರುವುದರಿಂದ ಕೊಹ್ಲಿ ಅನಿವಾರ್ಯವಾಗಿ ಚಹಾಲ್ ಜೊತೆಯಲ್ಲೇ ಮುನ್ನಡೆಯಬೇಕಿದೆ. ಇನ್ನು ವಾಷಿಂಗ್ಟನ್ ಸುಂದರ್ ಕೂಡ ಕಳೆದ ಪಂದ್ಯದಲ್ಲಿ ಹೆಚ್ಚಿನ ರನ್ ಬಿಟ್ಟಕೊಟ್ಟಿದ್ದಾರೆ. ಇವರಿಬ್ಬರ ಬೌಲಿಂಗ್ ಪ್ರದರ್ಶನ ನಾಳಿನ ಪಂದ್ಯದ ಫಲಿತಾಂಶದ ಮೇಲೆ ಪ್ರಮುಖ ಪರಿಣಾಮ ಬೀರಲಿದೆ.