ದುಬೈ:ಎಬಿ ಡಿ ವಿಲಿಯರ್ಸ್ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ 7 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ ನೀಡಿದ 178 ರನ್ಗಳ ಗುರಿಯನ್ನ ಬೆನ್ನತ್ತಿದ ಬೆಂಗಳೂರು ತಂಡ ಎಬಿ ಡಿ ವಿಲಿಯರ್ಸ್ ಅವರ ನಿರ್ಣಾಯಕ ಅರ್ಧಶತಕ(55) ಹಾಗೂ ನಾಯಕ ಕೊಹ್ಲಿ ಅವರ 43 ರನ್ಗಳ ನೆರವಿನಿಂದ ಇನ್ನು 2 ಎಸೆತಗಳು ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ತಲುಪಿತು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೊಹ್ಲಿ ಬಳಗ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು, ಆಸೀಸ್ ದಾಂಡಿಗ ಆ್ಯರೋನ್ ಫಿಂಚ್ ಕೇವಲ 14 ರನ್ಗಳಿಸಿ ಗೋಪಾಲ್ಗೆ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ನಾಯಕ ಕೊಹ್ಲಿ ಜೊತೆ 79 ರನ್ಗಳ ಜೊತೆಯಾಟ ನಡೆಸಿದರಾದರೂ ನಿಧಾನಗತಿ ಆಟ ಪ್ರದರ್ಶಿಸಿದರು. ಒತ್ತಡದಿಂದ ಬ್ಯಾಟ್ ಬೀಸಿದ ಯುವ ಬ್ಯಾಟ್ಸ್ಮನ್ 37 ಎಸೆತಗಳಲ್ಲಿ ಕೇವಲ 2 ಬೌಂಡರಿ ಸಹಿತ 35 ರನ್ಗಳಿಸಿ ಔಟಾದರು. ನಂತರದ ಎಸೆತದಲ್ಲೇ ಕೊಹ್ಲಿ ಕೂಡ 43 ರನ್ಗಳಿಸಿ ಯುವ ಬೌಲರ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು.
ಗೇಮ್ ಚೇಂಜ್ ಮಾಡಿದ ಮಿಸ್ಟರ್ 360
ಒಂದು ಹಂತದಲ್ಲಿ 13.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 102 ರನ್ಗಳಿಸಿ ಬೆಂಗಳೂರು ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಕ್ರೀಸ್ ಆಗತಾನೆ ಗುರ್ಕಿರಾತ್ ರನ್ಗಳಿಸಲು ಪರದಾಡಿದರು. ಆದರೆ ಎಬಿಡಿ ಕೆಲವು ಕೆಟ್ಟ ಎಸೆತಗಳನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ರನ್ಗತಿ ಕಾಪಾಡಿಕೊಳ್ಳುತ್ತಿದ್ದರು. ಆದರೂ ಕೊನೆಯ 18 ಎಸೆತಗಳಲ್ಲಿ ಗೆಲ್ಲಲು 35 ರನ್ಗಳ ಅಗತ್ಯವಿತ್ತು. ಉನ್ನಾದ್ಕಟ್ ಎಸೆದ ಆ ಓವರ್ನಲ್ಲಿ ಎಬಿಡಿ 3 ಸಿಕ್ಸರ್ ಸಿಡಿಸಿದರೆ, ಗುರುಕಿರಾತ್ ಒಂದು ಬೌಂಡರಿ ಬಾರಿಸುವ ಮೂಲಕ 25 ರನ್ ಸೂರೆಗೈದರು. 12 ಎಸೆತಗಳಲ್ಲಿ 35 ಇದ್ದ ಪಂದ್ಯದ ಗತಿ ಕೊನೆ ಓವರ್ಗೆ 10 ರನ್ಗಳಿಗೆ ಬಂದು ನಿಂತಿತು.