ಭಾರತದಲ್ಲಲ್ಲದೇ ಈಗ ವಿಶ್ವದಲ್ಲೇ ಹೆಚ್ಚು ಗಮನ ಸೆಳೆಯುತ್ತಿರುವ ಕ್ರೀಡೆಯಲ್ಲಿ ಕ್ರಿಕೆಟ್ ಕೂಡಾ ಒಂದು. ಅದರಲ್ಲೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೆಚ್ಚಿನ ಆಕರ್ಷಣೆ ಪಡೆಯುತ್ತಿದೆ. ಅನೇಕ ದೇಶದ ಸ್ಟಾರ್ ಆಟಗಾರರು ಐಪಿಎಲ್ನಲ್ಲಿ ಆಡುತ್ತಿರುವುದರಿಂದ ಜಾಗತಿಕವಾಗಿಯೂ ಈ ಲೀಗ್ಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ.
ಭಾರತದಲ್ಲಿ ನಡೆಯುವ ಐಪಿಎಲ್ನಂತೆ ಇತರ ದೇಶಗಳಲ್ಲೂ ಲೀಗ್ ಪಂದ್ಯಗಳು ನಡೆಯುತ್ತವೆ. ಆದರೆ ಐಪಿಎಲ್ನಷ್ಟು ಯಾವುದೂ ಯಶಸ್ಸು ಕಂಡಿಲ್ಲ. ಅದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಕ್ರಿಕೆಟ್ ಬಗ್ಗೆ ಇರುವ ಅಭಿಮಾನ. ಆಟಗಾರ ಮತ್ತು ತಂಡ ಬಗ್ಗೆ ಅಭಿಮಾನಿಗಳು ಭಾರಿ ಪ್ರೀತಿ ವ್ಯಕ್ತಪಡಿಸುತ್ತಾರೆ. 16ನೇ ಆವೃತ್ತಿ ಆಡಿದರೂ ಕಪ್ ಗೆಲ್ಲದ ಆರ್ಸಿಬಿಯೇ ಇದಕ್ಕೆ ಅಪ್ಪಟ ಉದಾಹರಣೆ.
ಸಾಮಾಜಿಕ ಜಾಲತಾಣಗಳು ಈಗ ಕ್ರಿಕೆಟ್ ಕ್ರೇಜ್ ಅನ್ನು ಹೆಚ್ಚು ಮಾಡಿವೆ ಎಂದರೆ ತಪ್ಪಾಗದು. ಇನ್ಸ್ಟಾಗ್ರಾಮ್, ಟ್ವಿಟರ್ ಮತ್ತು ಫೇಸ್ಬುಕ್ಗಳಲ್ಲಿ ಅಭಿಮಾನಿಗಳು ಪೋಸ್ಟ್ಗಳು ಮತ್ತು ಮೀಮ್ಸ್ಗಳ ಮೂಲಕ ಎದುರಾಳಿ ತಂಡದ ಕಾಲೆಳೆಯುದಲ್ಲದೇ ಅಪಹಾಸ್ಯಗಳನ್ನೂ ಮಾಡುತ್ತಾರೆ. ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ನಲ್ಲಿರುವ ಜಾಗತಿಕ ಸ್ಪೋರ್ಟ್ಸ್ ತಂಡದ ಬಗ್ಗೆ ಅಧ್ಯಯನದ ವರದಿಯಲ್ಲಿ ಭಾರತದ ಕ್ರಿಕೆಟ್ ಫ್ರಾಂಚೈಸಿ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ.
ಚಾಂಪಿಯನ್ ಚೆನ್ನೈ ಟಾಪ್: 5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಇನ್ಸ್ಟಾಗ್ರಾಮ್ನಲ್ಲಿ ಜಾಗತಿಕವಾಗಿ ಹೆಚ್ಚು ಪ್ರಖ್ಯಾತಿ ಪಡೆದ ತಂಡ. ಎಂ.ಎಸ್. ಧೋನಿಯ ಆಟ ನೋಡಲು ಜನ ಹೆಚ್ಚು ಇಷ್ಟಪಡುತ್ತಾರೆ ಎಂಬುದು ಈ ಬಾರಿಯ ಐಪಿಎಲ್ ನೇರಪ್ರಸಾದಲ್ಲಿ ಸಾಬೀತಾಗಿತ್ತು. ಧೋನಿ ಬ್ಯಾಟಿಂಗ್ ಬಂದಾಗ 2.3 ಕೋಟಿ ವೀಕ್ಷಣೆಯನ್ನು ಜಿಯೋ ಸಿನಿಮಾ ಗಳಿಸಿತ್ತು. ಈಗ 2023ರ ಮೇ ತಿಂಗಳಿನ ಇನ್ಸ್ಟಾಗ್ರಾಮ್ ಪಾಪ್ಯುಲರ್ ಆಗಿದ್ದ ಸ್ಪೋರ್ಟ್ಸ್ ಟೀಂ ಸಿಎಸ್ಕೆ ಎಂದು ತಿಳಿದು ಬಂದಿದೆ.
ಡಿಪೋರ್ಟ್ಸ್ ಮತ್ತು ಫೈನಾನ್ಸ್ ಎಂಬ ಸಂಸ್ಥೆ ಜಾಗತಿಕವಾಗಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಪ್ರಖ್ಯಾತಿ ಪಡೆದ ತಂಡಗಳ ಬಗ್ಗೆ ಅಧ್ಯಯನ ಮಾಡಿದೆ. ಅದರಂತೆ ಈ ಜನಪ್ರಿಯ ತಂಡಗಳ ಟಾಪ್ 20ರ ಪಟ್ಟಿಯಲ್ಲಿ ಐಪಿಎಲ್ನ ಆರು ತಂಡಗಳಿದೆ. ಇದರಿಂದ ಭಾರತದಲ್ಲಿ ಐಪಿಎಲ್ಗೆ ಎಷ್ಟು ಫ್ಯಾನ್ಗಳಿದ್ದಾರೆ ಎಂದು ತಿಳಿಯುತ್ತದೆ. ಅಗ್ರಸ್ಥಾನವನ್ನು ಸಿಎಸ್ಕೆ ಪಡೆದರೆ, ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್, ಐದನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 7ರಲ್ಲಿ ಗುಜರಾತ್ ಟೈಟಾನ್ಸ್ ಇದೆ. 15ರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು 18 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಇದೆ.
ಜಾಗತಿಕ ಮಟ್ಟದಲ್ಲಿ ಫುಟ್ಬಾಲ್ಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಫ್ಯಾನ್ಸ್ ಜೋರಾಗಿದ್ದಾರೆ. ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ರಿಯಲ್ ಮ್ಯಾಡ್ರಿಡ್, ಮೂರಲ್ಲಿ ಎಫ್ಸಿ ಬಾರ್ಸಿಲೋನಾ ಕಾಲ್ಚೆಂಡಿನ ಕ್ಲಬ್ಗಳಿವೆ.
ಇದನ್ನೂ ಓದಿ:BWF Rankings: ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ: ಇಂಡೋನೇಷ್ಯಾ ಓಪನ್ ಗೆದ್ದ ಚಿರಾಗ್, ಸಾತ್ವಿಕ್ ಜೋಡಿಗೆ 3ನೇ ಸ್ಥಾನ!