ಕೋಲ್ಕತ್ತಾ (ಪಶ್ಚಿಮ ಬಂಗಾಳ):ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ, 'ಕಿಂಗ್' ಖ್ಯಾತಿಯ ವಿರಾಟ್ ಕೊಹ್ಲಿ ಅವರಿಗೆ ಇಂದು 35ನೇ ಜನ್ಮದಿನದ ಸಂಭ್ರಮ. ಬರ್ತ್‌ಡೇ ಬಾಯ್‌ಗೆ ಬೆಂಗಾಲ್ ಕ್ರಿಕೆಟ್ ಸಂಸ್ಥೆ (ಸಿಎಬಿ) ವಿಶೇಷವಾದ ಚಿನ್ನ ಲೇಪಿತ ಬ್ಯಾಟ್ ಉಡುಗೊರೆ ನೀಡಲು ಮುಂದಾಗಿದೆ.
ಕೋಲ್ಕತ್ತಾದ ಪ್ರಸಿದ್ಧ ಈಡನ್ ಗಾರ್ಡನ್ನಲ್ಲಿ ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಆಚರಣೆ 'ಇಲ್ಲ' ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಹೇಳಿದೆ. ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿ ಬರ್ತ್‌ಡೇ ಆಚರಣೆಗೆ ಆಯೋಜಕರಾದ ಸಿಎಬಿ ಪರ್ಯಾಯ ಮಾರ್ಗ ಕಂಡುಕೊಂಡಿದೆ.
ಡ್ರೆಸ್ಸಿಂಗ್ ರೂಮ್ನಲ್ಲಿ ಸೆಲೆಬ್ರೇಷನ್: ರನ್ ಮಷಿನ್ ಎಂದೇ ಹೆಸರು ಪಡೆದಿರುವ ಶ್ರೇಷ್ಠ ಬ್ಯಾಟರ್ ವಿರಾಟ್ ಅವರಿಗೆ ಚಿನ್ನದ ಲೇಪಿತ ಬ್ಯಾಟ್ ಗಿಫ್ಟ್ ನೀಡಲು ನಿರ್ಧರಿಸಿರುವ ಬೆಂಗಾಲ್ ಕ್ರಿಕೆಟ್ ಸಂಸ್ಥೆಯು ಡ್ರೆಸ್ಸಿಂಗ್ ರೂಮ್ನಲ್ಲಿ ಸೆಲೆಬ್ರೇಷನ್ಗೆ ಪ್ಲಾನ್ ಮಾಡಿದೆ. ಡ್ರೆಸ್ಸಿಂಗ್ ರೂಮ್ಗೆ ದೊಡ್ಡ ಕೇಕ್ ಕಳುಹಿಸಿಕೊಟ್ಟು, ವಿಶೇಷ ಬ್ಯಾಟ್ ಹಸ್ತಾಂತರ ಮಾಡಲಾಗುವುದು ಎಂದು ಸಿಎಬಿ ಮುಖ್ಯಸ್ಥ ಸ್ನೇಹಶಶಿ ಗಂಗೂಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಹ್ಯಾಪಿ ಬರ್ತ್‌ಡೇ ಕೊಹ್ಲಿ! ಇಂದಿನ ಪಂದ್ಯದಲ್ಲಿ ಸಚಿನ್ ದಾಖಲೆ ಸರಿಗಟ್ಟುವರೇ 'ರನ್ ಮಷಿನ್'?
ಟಿಕೆಟ್ ವಿವಾದ: ಮತ್ತೊಂದೆಡೆ, ಈಡನ್ ಗಾರ್ಡನ್ ಪಂದ್ಯದ ಟಿಕೆಟ್ ವಿವಾದ ಉಂಟಾಗಿದೆ. ಮಾಜಿ ಕ್ರಿಕೆಟಿಗ ವೃದ್ಧಿಮಾನ್ ಸಹಾ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸಿಎಬಿ ಜೊತೆಗಿನ ವಿವಾದದ ಕಾರಣಕ್ಕೆ ಸಹಾ ಅವರಿಗೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ, ಕಾಳದಂಧೆಯಲ್ಲಿ ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟವನ್ನು ಪ್ರತಿಭಟಿಸಿ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ತಮಗೆ ಪಂದ್ಯದ ಟಿಕೆಟ್ ಬೇಡ ಎಂದಿದ್ದಾರೆ.
ರಾಜ್ಯಪಾಲರಿಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯದ ಟಿಕೆಟ್ ಅನ್ನು ಸಿಎಬಿ ಕಳುಹಿಸಿತ್ತು. ಆದರೆ, ಅದನ್ನು ಅವರು ವಾಪಸ್ ಕಳುಹಿಸಿದ್ದಾರೆ. ಅಲ್ಲದೇ, ಪಂದ್ಯದ ಸಲುವಾಗಿ ರಾಜಭವನದ ಬಾಗಿಲುಗಳನ್ನು ಸಾರ್ವಜನಿಕರಿಗೆ ತೆರೆಯಲಾಗಿದ್ದು, ಪಂದ್ಯ ವೀಕ್ಷಿಸಲು ದೊಡ್ಡ ಪರದೆ ಅಳವಡಿಸಲಾಗಿದೆ. ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ 500 ಜನರಿಗೆ ಅವಕಾಶ ನೀಡಲು ರಾಜಭವನ ನಿರ್ಧರಿಸಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶನಿವಾರ ಸಂಜೆಯೇ ನಗರಕ್ಕೆ ಆಗಮಿಸಿದ್ದರು. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪಂದ್ಯದ ಆರಂಭ ಗಂಟೆ ಬಾರಿಸಲಿದ್ದಾರೆ. ಶನಿವಾರವೇ ಈಡನ್ ಗಾರ್ಡನ್ ಮುಖ್ಯದ್ವಾರದಲ್ಲಿ ಕ್ರಿಕೆಟ್ ಪ್ರೇಮಿಗಳು ನೆರೆದಿದ್ದರು. ವಿರಾಟ್ ಕೊಹ್ಲಿ ಅವರನ್ನು ಕಂಡು ಸಂಭ್ರಮಪಟ್ಟಿದ್ದರು. ಅಭಿಮಾನಿಗಳು ತಮ್ಮ ಕೈಯಲ್ಲಿ ವಿಶ್ವಕಪ್ ಪ್ರತಿಕೃತಿಗಳು ಮತ್ತು ತ್ರಿವರ್ಣಗಳನ್ನು ಹಿಡಿದು ತಮ್ಮ ಮೆಚ್ಚಿನ ಆಟಗಾರರನ್ನು ನೋಡಲು ಸೇರಿದ್ದರು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ಯಾರಿಗೆಲ್ಲ ಸೆಮಿಫೈನಲ್ ಪ್ರವೇಶಿಸುವ ಅವಕಾಶ? ಹೀಗಿದೆ ಲೆಕ್ಕಾಚಾರ