ಜೋಹಾನ್ಸ್‌ಬರ್ಗ್:'ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ' ಎಂಂದು ಭಾರತ ತಂಡದ ವೇಗದ ಬೌಲರ್ ಶಾರ್ದುಲ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ 2ನೇ ದಿನ 7 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ಗೆ ಮಾರಕವಾದ ಅವರು ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದರು.
ಠಾಕೂರ್ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್( 61ಕ್ಕೆ 7 ವಿಕೆಟ್) ಪ್ರದರ್ಶನದ ಬಲದಿಂದ ಭಾರತವು ಎರಡನೇ ಟೆಸ್ಟ್‌ನಲ್ಲಿ ಕಮ್ಬ್ಯಾಕ್ ಮಾಡಲು ಸಾಧ್ಯವಾಗಿದೆ. ಅಲ್ಲದೆ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತೀಯ ಬೌಲರ್ವೊಬ್ಬರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಇದಾಗಿದೆ. ದ. ಆಫ್ರಿಕಾ ನೆಲದಲ್ಲಿ 7 ವಿಕೆಟ್ ಪಡೆದ ಏಷ್ಯಾದ ಮೊದಲ ವೇಗದ ಬೌಲರ್ ಕೂಡ ಅವರಾಗಿದ್ದಾರೆ.
ಅಂಕಿ - ಅಂಶಗಳ ಪ್ರಕಾರ ಇದು ನನ್ನ ಅತ್ಯುತ್ತಮ ಪ್ರದರ್ಶನವಾಗಿದೆ. ಆದರೆ, ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ ಎಂದು ನಾನು ನಂಬುತ್ತೇನೆ ಎಂದು ಪಂದ್ಯದ ನಂತರದ ಮಾಧ್ಯಮಗೋಷ್ಠಿಯಲ್ಲಿ ಠಾಕೂರ್ ಹೇಳಿದರು. ನಾನು ಬೌಲಿಂಗ್ ಮಾಡಲು ಪ್ರಾರಂಭಿಸುವ ವೇಳೆಗೆ, ಪಿಚ್ನ 22 ಅಡಿ ಭಾಗದಲ್ಲಿ ಚೆಂಡು ಪುಟಿದೇಳುವುದು ಹಾಗೂ ಕೆಳಹಂತದಲ್ಲಿ ಬ್ಯಾಟರ್ಗಳತ್ತ ಮುನ್ನುಗ್ಗುತ್ತಿರುವುದು ಕಂಡುಬಂತು. ಹೀಗಾಗಿ ನಾನು ಆ ಸಂದರ್ಭದಲ್ಲಿ ನಿರೀಕ್ಷಿತ ಏರಿಯಾ ಹಾಗೂ ಪಿಚ್ನಲ್ಲಿನ ಬಿರುಕುಗಳ ಸದ್ಬಳಕೆಗೆ ಯತ್ನಿಸಿದೆ ಎಂದರು.