ಕೊಲಂಬೊ (ಶ್ರೀಲಂಕಾ): ಪಂದ್ಯಕ್ಕೆ ಮಳೆ ಕಾಡಿದರೆ, ಪಾಕಿಸ್ತಾನ ಬೌಲರ್ಗಳನ್ನು ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕಾಡಿದರು. ಈ ಇಬ್ಬರು ಬ್ಯಾಟರ್ಗಳ ಅಬ್ಬರದ ಶತಕದಾಟದ ನೆರವಿನಿಂದ ಭಾರತ ತಂಡ ಪಾಕಿಸ್ತಾನದ ವಿರುದ್ಧ ನಿಗದಿತ ಓವರ್ಗೆ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದೆ. ಬಾಬರ್ ನಾಯಕತ್ವದ ಪಾಕ್ ಏಷ್ಯಾಕಪ್ನ ಸೂಪರ್ ಫೋರ್ ಹಂತದ ಎರಡನೇ ಪಂದ್ಯ ಗೆಲ್ಲಲು 357 ರನ್ ಕಲೆಹಾಕಬೇಕಿದೆ.
ಮೀಸಲು ದಿನವೂ ವರುಣನ ಕಾಟದಿಂದ ತಡವಾಗಿ ಪಂದ್ಯ ಆರಂಭವಾಯಿತು . 4:40ಕ್ಕೆ ಆರಂಭವಾದ ಪಂದ್ಯದಲ್ಲಿ ಭಾರತ ಕೆಎಲ್ ರಾಹುಲ್ ಮತ್ತು ವಿರಾಟ್ ಬ್ಯಾಟಿಂಗ್ ಮುಂದುವರೆಸಿದರು. ಈ ಇಬ್ಬರು ಆಟಗಾರರು ಪಾಕಿಸ್ತಾನದ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪಿಚ್ಗೆ ಸೆಟ್ ಆಗಲು ಇಬ್ಬರು ಆಟಗಾರರು ಸ್ವಲ್ಪ ಸಮಯ ತೆಗೆದುಕೊಂಡರಾದರೂ ಆ ಬಳಿಕ ಚೇತರಿಸಿಕೊಂಡು ಪರಾಕ್ರಮ ಮೆರೆದರು.
ನಿನ್ನೆ 24.1 ಓವರ್ಗೆ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಸಲಾಗಿತ್ತು. ಅಲ್ಲಿಂದಲೇ ಇಂದು ಮ್ಯಾಚ್ ಆರಂಭವಾಯಿತು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕನ್ನಡಿಗ ಕೆಎಲ್ ರಾಹುಲ್ ಸಂಪೂರ್ಣ ಪಿಟ್ ಆಗಿರುವುದನ್ನು ಮೈದಾನದಲ್ಲಿ ತಮ್ಮ ಆಟದ ಮೂಲಕ ಸಾಬೀತು ಮಾಡಿದರು. ಅಲ್ಲದೇ ಅವರನ್ನು ಟೀಕೆ ಮಾಡುತ್ತಿದ್ದ ಎಲ್ಲರಿಗೂ ತಮ್ಮ ಸಿಕ್ಸ್ ಮತ್ತು ಬೌಂಡರಿಗಳಿಂದ ಉತ್ತರಿಸುತ್ತಾ ಅರ್ಧಶತಕವನ್ನು ಪೂರೈಸಿ, ಶತಕವನ್ನು ಗಳಿಸಿದರು. ಅವರು ಈ ಇನ್ನಿಂಗ್ಸ್ನಲ್ಲಿ 106 ಬಾಲ್ನ್ನು ಫೇಸ್ ಮಾಡಿ 12 ಬೌಂಡರಿ ಮತ್ತು 2 ಸಿಕ್ಸ್ನಿಂದ ಅಜೇಯವಾಗಿ 111 ರನ್ ಕಲೆಹಾಕಿದರು.