ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಭಾನುವಾರ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ತಮ್ಮ ಚೊಚ್ಚಲ ವಿಕೆಟ್ ಜೊತೆಗೆ ಪಂದ್ಯದಲ್ಲಿ ಒಟ್ಟು ಐದು ಜನರನ್ನು ಪೆವಿಲಿಯನ್ಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂತಾರಾಷ್ಟ್ರೀಯ ಮೂರನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳ ಗುಚ್ಛ ಪಡೆದು ಅವರು ಮಿಂಚಿದರು. ಅರ್ಶದೀಪ್ ಅವರ ಈ ಪ್ರದರ್ಶನದಿಂದ ಹರಿಣಗಳ ಪಡೆ ಅಲ್ಪಮೊತ್ತಕ್ಕೆ ಕುಸಿಯಿತು. ಈ ಪ್ರದರ್ಶನ ಹಿಂದಿನ ರಹಸ್ಯವನ್ನು ಸಿಂಗ್ ಬಿಸಿಸಿಐ ಟಿವಿಯಲ್ಲಿ ಹಂಚಿಕೊಂಡಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ಮತ್ತು ಅವೇಶ್ ಖಾನ್ ದಕ್ಷಿಣ ಆಫ್ರಿಕಾವನ್ನು ಕಾಡಿದರು. ಈ ಜೋಡಿಯ ಬೌಲಿಂಗ್ ದಾಳಿಗೆ 27.3 ಓವರ್ ಆಡಿದ ತಂಡ 10 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿತು. ಭಾರತ ಈ ಗುರಿಯನ್ನು ಕೇವಲ 2 ವಿಕೆಟ್ ಕಳೆದುಕೊಂಡು 17ನೇ ಓವರ್ನಲ್ಲೇ ಗುರಿ ಪೂರೈಸಿತು. ವಿಶ್ವಕಪ್ ಫೈನಲ್ನ ನಂತರ ಆಡಿದ ಮೊದಲ ಪಂದ್ಯವನ್ನೇ ಗೆದ್ದುಕೊಂಡಿತು.
ತಂಡದ ಜೊತೆಗಾರ ಅವೇಶ್ ಖಾನ್ ಜೊತೆಗೆ ಬಿಸಿಸಿಐ ಟಿವಿಯಲ್ಲಿ ಮಾತನಾಡಿದ ಅರ್ಶದೀಪ್ ಸಿಂಗ್ ಉತ್ತಮ ಪ್ರದರ್ಶನ ಹಿಂದೆ ಪಂದ್ಯಕ್ಕೂ ಮುನ್ನಾದಿನ ನಡೆಸಿದ ಫೋಟೋ ಶೂಟ್ನಲ್ಲಿ ಒಟ್ಟಿಗೆ ಇದ್ದದ್ದು ಕಾರಣ ಎಂದು ಹಾಸ್ಯಮಾಡಿದ್ದಾರೆ. " ಉತ್ತಮ ಪ್ರದರ್ಶನ ನೀಡಿದ್ದು ಸಂತಸ ತಂದಿದೆ. ನಾನು ನಿಮ್ಮೊಂದಿಗೆ (ಅವೇಶ್) ಫೋಟೋಶೂಟ್ ಮಾಡಿಸಿದ್ದು ಇಲ್ಲಿ ಉತ್ತಮ ಪ್ರದರ್ಶನ ನೀಡಲು ನನಗೆ ದೊಡ್ಡ ಉತ್ತೇಜನ ನೀಡಿದೆ" ಎಂದು ಹಾಸ್ಯಭರಿತವಾಗಿ ನುಡಿದರು.