ಕರ್ನಾಟಕ

karnataka

ETV Bharat / sports

ನಿವೃತ್ತಿ ಘೋಷಿಸಿ ಹತಾಶನಾಗಿದ್ದ ನನಗೆ ಮತ್ತೆ ಕ್ರಿಕೆಟ್​ಗೆ ಮರಳಲು ಸಿಎಸ್​ಕೆ-ಧೋನಿ ಕಾರಣ : ಅಂಬಾಟಿ ರಾಯುಡು - ಅಂಬಾಟಿ ರಾಯುಡು ಏಕದಿನ ವಿಶ್ವಕಪ್

ಧೋನಿ ಭಾಯ್​ ಪ್ರತಿಯೊಬ್ಬರಿಂದ ಅತ್ಯುತ್ತಮವಾದದ್ದನ್ನು ಹೇಗೆ ಹೊರತೆಗೆಯಬೇಕೆಂಬುವುದನ್ನ ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿಯೇ ಅವರು ವಿಶ್ವದ ನಂಬರ್​ 1 ನಾಯಕ. ನನ್ನ ಪಾತ್ರದ ವಿಷಯದಲ್ಲಿ ನಾನು ಸಿಎಸ್​ಕೆಯಲ್ಲಿ ತುಂಬಾ ಆರಾಮದಾಯಕವಾಗಿದ್ದೇನೆ. ಅವರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಅತ್ಯುತ್ತಮ ಮತ್ತು ಶೆ.100% ಕ್ಕಿಂತ ಹೆಚ್ಚಿನದನ್ನು ನೀಡಲು ಬಯಸುತ್ತೇನೆ..

Ambati Rayudu reveal how CSK convinced to return to cricket
ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್​

By

Published : Feb 5, 2022, 8:23 PM IST

ನವದೆಹಲಿ :2019ರ ಏಕದಿನ ವಿಶ್ವಕಪ್​ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ನೊಂದು ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು ಮತ್ತೆ ಕ್ರಿಕೆಟ್​ ಲೋಕಕ್ಕೆ ಮರಳುವುದಕ್ಕೆ ಸಿಎಸ್​ಕೆ ಮತ್ತು ಧೋನಿ ಕಾರಣ ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡದಲ್ಲಿ ಖಾಯಂ ಆಟಗಾರನಾಗಿದ್ದರೂ, 2019ರ ವಿಶ್ವಕಪ್​ ವೇಳೆ ಅವರನ್ನು ತಂಡದಿಂದ ಕೈಬಿಟ್ಟು ತಮಿಳುನಾಡಿನ ಆಲ್​ರೌಂಡರ್​ ವಿಜಯ್ ಶಂಕರ್​ ಅವರನ್ನು ಆಯ್ಕೆ ಮಾಡಲಾಗಿತ್ತು. ಇದು ಭಾರತೀಯ ಕ್ರಿಕೆಟ್​ ವಲಯದಲ್ಲಿ ಭಾರಿ ಚರ್ಚೆಗೀಡಾಗಿತ್ತು. ಇದರ ಬೆನ್ನಲ್ಲೇ ಅವಕಾಶ ವಂಚಿತನಾಗಿದ್ದಕ್ಕೆ ನೊಂದು ಸ್ವಲ್ಪ ದಿನಗಳ ನಂತರ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

ಆದರೆ, ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನಂತರ ಹತಾಶೆಗೆ ಒಳಗಾಗಿದ್ದ ಸಂದರ್ಭದಲ್ಲಿ ಮತ್ತೆ ಕ್ರಿಕೆಟ್​ಗೆ ಮರಳುವುದಕ್ಕೆ ಚೆನ್ನೈ ಸೂಪರ್​ ಕಿಂಗ್ಸ್‌ ಫ್ರಾಂಚೈಸಿ ತಮ್ಮನ್ನು ಮನವೊಲಿಸಿತು ಎಂದು ಕ್ರಿಕ್​ಬಜ್​ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ವಿಶ್ವಕಪ್​ ನಿರಾಶೆಯಲ್ಲಿದ್ದ ವೇಳೆ ಸಿಎಸ್​ಕೆ ಮ್ಯಾನೇಜ್​ಮೆಂಟ್ ನನ್ನ ಜೊತೆ ಮಾತನಾಡಿ, ನನ್ನನ್ನು ಮತ್ತೆ ಕ್ರಿಕೆಟ್​ಗೆ ಮರಳುವಂತೆ ಮನವೊಲಿಸಿದರು. ಇಂಡಿಯಾ ಸಿಮೆಂಟ್​ ಪರ ಒಂದಷ್ಟು ಏಕದಿನ ಪಂದ್ಯಗಳನ್ನಾಡಲು ಹೇಳಿದರು. ಅಲ್ಲಿ ಆಡಿದ ನಂತರ ಆ ಕಷ್ಟದ ಸಂದರ್ಭಗಳನ್ನು ಮರೆತು ಮತ್ತೆ ಕ್ರಿಕೆಟ್​ಗೆ ಮರಳಲು ನೆರವಾಯಿತು".

"ಖಂಡಿತವಾಗಿ ಆ ಕ್ಷಣಗಳು ನನಗೆ ತುಂಬಾ ಕಠಿಣವಾಗಿದ್ದವು. ನಾನು ಕ್ರಿಕೆಟ್​ ಬಿಟ್ಟುಬಿಡಬೇಕೆಂದುಕೊಂಡಿದ್ದೆ. ಆ ಸಂದರ್ಭದಲ್ಲಿ ನನ್ನಲ್ಲಿ ಕ್ರಿಕೆಟ್​ ಆಡುವುದಕ್ಕೆ ಏನೂ ಉಳಿದಿಲ್ಲ ಎಂಬ ಭಾವನೆ ಉಂಟಾಗಿತ್ತು. ಆದರೆ, ನನ್ನಲ್ಲಿ ಇನ್ನೂ ಕ್ರಿಕೆಟ್​ ಇದೆ, ಜೊತೆಗೆ ಕ್ರಿಕೆಟ್​ ಆಡುವುದಕ್ಕೆ ಬೇಕಾದ ಫಿಟ್‌ನೆಸ್​ ಮತ್ತು ಆಡುವ ಮನಸ್ಸು ಇದೆ ಎಂದು ನನ್ನ ಫ್ರಾಂಚೈಸಿ ಮನವೊಲಿಸಿತು.

ನಂತರ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗದಿರುವುದರಲ್ಲಿ ನನ್ನ ಪಾತ್ರವಿಲ್ಲದಿದ್ದರಿಂದ ನಾನೇಕೆ ಕ್ರಿಕೆಟ್ ಬಿಡಬೇಕು? ಎಂಬ ಭಾವನೆಯನ್ನ ನನ್ನಲ್ಲಿ ಉಂಟಾಯಿತು. ನಂತರ ನಾನು ಸಿಎಸ್​ಕೆಗಾಗಿ ಆಡುವುದಕ್ಕೆ ಆರಂಭಿಸಿದೆ. ಇದೀಗ ಐಪಿಎಲ್​ನಲ್ಲಿ ನಾನು ನನ್ನ ಕ್ರಿಕೆಟ್​ ಅನ್ನು ಬಹಳ ಎಂಜಾಯ್​ ಮಾಡುತ್ತಿದ್ದೇನೆ" ಎಂದು ರಾಯುಡು ಹೇಳಿದ್ದಾರೆ.

ಧೋನಿ ಶ್ರೇಷ್ಠ ನಾಯಕ :ಕಾಶಿ(ಸಿಎಸ್​ಕೆ ಸಿಇಒ) ಸರ್ ಭೇಟಿಯ ನಂತರ ಧೋನಿ ಅವರನ್ನು ಭೇಟಿ ಮಾಡಿದೆ. ಆ ವ್ಯಕ್ತಿಗಳು ನನ್ನಲ್ಲಿ ಕ್ರಿಕೆಟ್​ ಇನ್ನೂ ಉಳಿದಿದೆ ಎಂದು ಪ್ರಾಮಾಣಿಕವಾಗಿ ನಂಬಿದ್ದರು . ಹಾಗಾಗಿ ನನ್ನಿಂದ ಅತ್ಯುತ್ತಮವಾದದ್ದನ್ನು ಹೊರ ತೆಗೆಯುವಲ್ಲಿ ಅವರಿಂದ ಸಾಧ್ಯವಾಯಿತು. ಅದಕ್ಕಾಗಿ ನಾನು ಅವರಿಗೆ ಋಣಿಯಾಗಿರುತ್ತೇನೆ.

ಧೋನಿ ಭಾಯ್​ ಪ್ರತಿಯೊಬ್ಬರಿಂದ ಅತ್ಯುತ್ತಮವಾದದ್ದನ್ನು ಹೇಗೆ ಹೊರ ತೆಗೆಯಬೇಕೆಂಬುವುದನ್ನ ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿಯೇ ಅವರು ವಿಶ್ವದ ನಂಬರ್​ 1 ನಾಯಕ. ನನ್ನ ಪಾತ್ರದ ವಿಷಯದಲ್ಲಿ ನಾನು ಸಿಎಸ್​ಕೆಯಲ್ಲಿ ತುಂಬಾ ಆರಾಮದಾಯಕವಾಗಿದ್ದೇನೆ. ಅವರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಅತ್ಯುತ್ತಮ ಮತ್ತು ಶೆ.100% ಕ್ಕಿಂತ ಹೆಚ್ಚಿನದನ್ನು ನೀಡಲು ಬಯಸುತ್ತೇನೆ ಎಂದು ರಾಯಡು ತಿಳಿಸಿದ್ದಾರೆ.

ಇದನ್ನೂ ಓದಿ:ಕುಲ್ದೀಪ್​-ಚಹಲ್​ರನ್ನು ಒಟ್ಟಿಗೆ ಆಡಿಸಬೇಕೆಂಬುದು ನನ್ನ ಮನದಲ್ಲಿದೆ : ರೋಹಿತ್ ಶರ್ಮಾ

ABOUT THE AUTHOR

...view details