ಚೆನ್ನೈ (ತಮಿಳುನಾಡು): ಅಫ್ಘಾನಿಸ್ತಾನ ತಾನೂ ಕೂಡಾ ಬಲಿಷ್ಠ ಕ್ರಿಕೆಟ್ ತಂಡ ಎಂಬ ಸಂದೇಶವನ್ನು 2023ರ ವಿಶ್ವಕಪ್ ಟೂರ್ನಿಯಲ್ಲಿ ನೀಡಿದೆ. ಮೂರನೇ ವಿಶ್ವಕಪ್ ಆಡುತ್ತಿರುವ ತಂಡ ಸೋಮವಾರ ಚೆಪಾಕ್ ಕ್ರೀಡಾಂಗಣದಲ್ಲಿ ಪಾಕಿಸ್ತಾನವನ್ನು ಮಣಿಸಿ ಅಚ್ಚರಿ ಮೂಡಿಸಿತು. ಸತತ ಏಳು ಏಕದಿನ ಪಂದ್ಯಗಳಲ್ಲಿ ಪಾಕ್ ವಿರುದ್ಧ ಸೋಲುಂಡಿದ್ದ ಅಫ್ಘನ್ ವಿಶ್ವ ವೇದಿಕೆಯಲ್ಲಿ ಸೇಡು ತೀರಿಸಿಕೊಂಡಿದೆ. ಈ ಐತಿಹಾಸಿಕ ವಿಜಯದ ನಂತರ ಅಫ್ಘಾನಿಸ್ತಾನ ಕ್ರಿಕೆಟಿಗರ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಕೆಳಹಂತದಲ್ಲಿದ್ದ ತಂಡ ನಂತರ 6ನೇ ಸ್ಥಾನಕ್ಕೆ ಏರಿದ್ದಲ್ಲದೇ ಪ್ಲೇ ಆಫ್ ಕನಸನ್ನು ಜೀವಂತ ಉಳಿಸಿಕೊಂಡಿದೆ.
ರೋಚಕ ವಿಜಯವನ್ನು ತಂಡದ ಆಟಗಾರರು ಶಾರುಖ್ ಖಾನ್ ಅವರ 'ಚೆನ್ನೈ ಎಕ್ಸ್ಪ್ರೆಸ್' ಸಿನಿಮಾದ ಜನಪ್ರಿಯ 'ಲುಂಗಿ ಡ್ಯಾನ್ಸ್' ಹಾಡಿನೊಂದಿಗೆ ಸಂಭ್ರಮಿಸಿದರು. ಮೈದಾನದಿಂದ ಹೊಟೇಲ್ಗೆ ತೆರಳುವಾಗ ಟೀಂ ಬಸ್‌ನಲ್ಲಿ ಆಟಗಾರರು ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ವಿಕ್ಷಣೆ ಗಳಿಸುವುದರೊಂದಿಗೆ, ಸಾಕಷ್ಟು ಪ್ರಮಾಣದಲ್ಲಿ ಹಂಚಿಕೆಯೂ ಆಗಿದೆ.
ಪಂದ್ಯ ಗೆದ್ದ ನಂತರ ಅಫ್ಘಾನಿಸ್ತಾನ ತಂಡದ ಸದಸ್ಯರು ಕ್ರೀಡಾಂಗಣಕ್ಕೆ ಒಂದು ಸುತ್ತು ಬಂದು ನೆರೆದಿದ್ದ ಅಭಿಮಾನಿಗಳ ಜತೆ ಸಂತಸ ಹಂಚಿಕೊಂಡರು. ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ನಿರೂಪಣೆ ಮಾಡುತ್ತಿದ್ದ ಇರ್ಫಾನ್ ಪಠಾಣ್ ಅವರು ರಶೀದ್ ಖಾನ್ ಜತೆ ಸೇರಿಕೊಂಡು ಮೈದಾನದಲ್ಲೇ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.