ಮುಂಬೈ (ಮಹಾರಾಷ್ಟ್ರ): ನ್ಯೂಜಿಲೆಂಡ್ ವಿರುದ್ಧದ ಸೆಮೀಸ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆಗಳನ್ನು ಮುರಿದಿದ್ದಾರೆ. ಇದೇ ವಿಶ್ವಕಪ್ನಲ್ಲಿ ಏಕದಿನ ಕ್ರಿಕೆಟ್ನ 49ನೇ ಶತಕ ಗಳಿಸಿ ಸಚಿನ್ ದಾಖಲೆ ಸರಿಗಟ್ಟಿದ್ದ ವಿರಾಟ್, ಇಂದು 50ನೇ ಶತಕ ಮಾಡಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
452 ಇನ್ನಿಂಗ್ಸ್ಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ 49 ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ 279 ಇನ್ನಿಂಗ್ಸ್ಗಳನ್ನು ಆಡಿದ್ದು, 50ನೇ ಏಕದಿನ ಶತಕವನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಒಟ್ಟಾರೆ ಅಂತಾರಾಷ್ಟ್ರೀಯ 100 ಶತಕ ಮತ್ತು 34,357 ರನ್ಗಳ ದಾಖಲೆ ಮುರಿಯುವುದು ವಿರಾಟ್ ಕೊಹ್ಲಿಯ ಮುಂದಿನ ಗುರಿ ಎಂದರೆ ತಪ್ಪಾಗದು. ಸದ್ಯ ವಿರಾಟ್ 26,478 ರನ್ ಗಳಿಸಿದ್ದಾರೆ ಹಾಗೇ 80 ಶತಕ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್ನಲ್ಲಿ 18,426 ರನ್ ಗಳಿಸಿದ್ದರೆ, ವಿರಾಟ್ ಸದ್ಯ 13,794 ರನ್ ಗಳಿಸಿದ್ದಾರೆ. ಇದೇ ಫಾರ್ಮ್ನಲ್ಲಿ ವಿರಾಟ್ ಮುಂದುವರಿದರೆ ಈ ದಾಖಲೆಗಳು ಮುಂದಿನ ವರ್ಷಗಳಲ್ಲಿ ಬ್ರೇಕ್ ಆಗಲಿದೆ.
ವಿರಾಟ್ ಇನ್ನಿಂಗ್ಸ್: ರೋಹಿತ್ ಶರ್ಮಾ ಮಾಡಿದ್ದ ಅಬ್ಬರದ ಆರಂಭವನ್ನು ವಿರಾಟ್ ಕೊಹ್ಲಿ ಮುಂದುವರೆಸಿದರು. 9 ಬೌಂಡರಿ, 2 ಸಿಕ್ಸ್ನ ನೆರವಿನಿಂದ ವಿರಾಟ್ 113 ಬಾಲ್ನಲ್ಲಿ 117 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು.
ವಿಶ್ವಕಪ್ನ ಟಾಪ್ ಸ್ಕೋರರ್:ನಡೆಯುತ್ತಿರುವ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ ಆಗಿದ್ದಾರೆ. 2023ರ ವಿಶ್ವಕಪ್ನಲ್ಲಿ 711 ರನ್ಗಳು ವಿರಾಟ್ ಬ್ಯಾಟ್ನಿಂದ ಬಂದಿದೆ. ಈ ವಿಶ್ವಕಪ್ನಲ್ಲಿ ವಿರಾಟ್ 3 ಶತಕ, 5 ಅರ್ಧಶತಕದಿಂದ ತಮ್ಮ ಗೋಲ್ಡನ್ ಫಾರ್ಮ್ ಮುಂದುವರೆಸಿದ್ದಾರೆ. 2003ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ 673 ಗಳಿಸಿದ್ದು, ಈ ವರೆಗೆ ವಿಶ್ವಕಪ್ನಲ್ಲಿ ಗಳಿಸಿದ ದೊಡ್ಡ ಮೊತ್ತವಾಗಿತ್ತು. ಈ ವಿಶ್ವಕಪ್ನಲ್ಲಿ ವಿರಾಟ್ ಇದನ್ನು ದಾಟಿದ್ದಲ್ಲದೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿದ್ದಾರೆ.
ಸಚಿನ್ಗೆ ನಮಸ್ಕರಿಸಿದ ಕಿಂಗ್: ವಾಂಖೆಡೆ ಮೈದಾನ ಸಚಿನ್ ತೆಂಡೂಲ್ಕರ್ ಅವರು ಆಡಿ ಬೆಳೆದ ಜಾಗ. ಇದಕ್ಕಾಗಿಯೇ ವಿಶ್ವಕಪ್ ಸಮಯದಲ್ಲಿ ಸಚಿನ್ ಅವರ 50ನೇ ಜನ್ಮದಿನದ ನಿಮಿತ್ತ ಪ್ರತಿಮೆ ಸಹ ಮೈದಾನದಲ್ಲಿ ಮಾಡಲಾಗಿತ್ತು. ಇಲ್ಲಿ ವಿರಾಟ್ ಕೊಹ್ಲಿಯ 49ನೇ ಶತಕವನ್ನು ನಿರೀಕ್ಷಿಸಲಾಗಿತ್ತು. ಆದರೆ, ವಿರಾಟ್ ಇಲ್ಲಿ ದಾಖಲೆ ಮುರಿಯುವ 50ನೇ ಶತಕದ ಇನ್ನಿಂಗ್ಸ್ ಆಡಿದರು. ವಿರಾಟ್ 50ನೇ ಶತಕವನ್ನು ಸಚಿನ್ ತೆಂಡೂಲ್ಕರ್ ಮೈದಾನದಲ್ಲೇ ಇದ್ದು ಕಣ್ತುಂಬಿಕೊಂಡಿದ್ದಾರೆ. ಸ್ಟೇಡಿಯಮ್ನಲ್ಲಿದ್ದ ಸಚಿನ್ಗೆ ವಿರಾಟ್ ಬೆನ್ನು ಬಾಗಿಸಿ ನಮಸ್ಕರಿಸಿದರು.
ಅನುಷ್ಕಾ ಮುತ್ತಿನ ಸುರಿಮಳೆ: ಅನುಷ್ಕಾ ಶರ್ಮಾ ಎಂದಿನಂತೆ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿದ್ದಾರೆ. ಪತಿ ವಿರಾಟ್ ಕೊಹ್ಲಿಯ ದಾಖಲೆಯ ಶತಕ ಕಂಡ ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಮುತ್ತಿನ ಸುರಿಮಳೆ ಹರಿಸಿದ್ದಾರೆ. ಸೆಮೀಸ್ ಪಂದ್ಯದ ಕ್ರೇಜ್ ನಡುವೆ ಈ ವಿಡಿಯೋ ಸಹ ವೈರಲ್ ಆಗುತ್ತಿದೆ.
ಇದನ್ನೂ ಓದಿ:ವಿಶ್ವಕಪ್ನಲ್ಲಿ ಹೆಚ್ಚು ರನ್ಗಳ ದಾಖಲೆ ಬರೆದ ‘ವಿರಾಟ’: ಸಚಿನ್ ತೆಂಡೂಲ್ಕರ್ ರೆಕಾರ್ಡ್ ಮುರಿದ ಕಿಂಗ್ ಕೊಹ್ಲಿ