ಜಾರ್ಜ್‌ಟೌನ್, ಗಯಾನಾ:ನಿನ್ನೆ ಪಂದ್ಯ ರೋಚಕತೆಯಿಂದ ಕೂಡಿತ್ತು. ಅಷ್ಟೇ ಅಲ್ಲ ಈ ಸರಣಿ ಜೀವಂತವಾಗಿರಿಸಲು ಭಾರತ ತಂಡ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಅದರಂತೆ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯ ಮೂರನೇ ಪಂದ್ಯವನ್ನು (3rd T20I) ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬಳಿಕ ತಂಡ ನಿಗದಿತ 20 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ವಿಂಡೀಸ್ ಪರ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ 42 ಎಸೆತಗಳಲ್ಲಿ 42 ರನ್ ಗಳಿಸಿದರು. ಇದಾದ ಬಳಿಕ ನಾಯಕ ರೋವ್ಮನ್ ಪೊವೆಲ್ 19 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು. ಟೀಂ ಇಂಡಿಯಾ ಪರ ಕುಲದೀಪ್ ಯಾದವ್ 28 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ಮುಖೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ವಿಂಡೀಸ್ ನೀಡಿದ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡ ಆರಂಭಿಕ ಆಘಾತ ಎದುರಿಸಿತ್ತು. 5 ಓವರ್ಗಳ ಅಂತರದಲ್ಲಿ ಭಾರತ ತಂಡ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಬಳಿಕ ಬಂದ ಸೂರ್ಯಕುಮಾರ್ ಭರ್ಜರಿ ಬ್ಯಾಟ್ ಬೀಸಿದರು. ವೆಸ್ಟ್ ಇಂಡೀಸ್ ಬೌಲರ್ಗಳ ಬೆವರಿಳಿಸಿದರು.
ಭಾರತ ತಂಡಕ್ಕೆ ಆರಂಭಿಕ ಆಘಾತ:ಭಾರತ ತಂಡದ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ತಂಡವು 6 ರನ್‌ಗಳಿಗೆ ಮೊದಲ ವಿಕೆಟ್ ಮತ್ತು 34 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ 1 ಮತ್ತು ಶುಭಮನ್ ಗಿಲ್ 6 ರನ್ ಗಳಿಸಿ ಔಟಾದರು. ಇದಾದ ನಂತರ ಸೂರ್ಯಕುಮಾರ್ ಯಾದವ್ ಅವರು ತಿಲಕ್ ವರ್ಮಾ ಅವರೊಂದಿಗೆ ಅರ್ಧಶತಕದ ಜೊತೆಯಾಟ ಹಂಚಿಕೊಳ್ಳುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡರು. ಸೂರ್ಯ ಕೂಡ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ತಂಡದ ಪರ ಸೂರ್ಯಕುಮಾರ್ ಯಾದವ್ 44 ಎಸೆತಗಳಲ್ಲಿ 83 ರನ್ ಸಿಡಿಸಿದರು. ಈ ವೇಳೆ, ಅವರು 4 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಗಳಿಸಿದರು. ಇನ್ನು ಸೂರ್ಯಕುಮಾರ್ಗೆ ಸಾಥ್ ನೀಡಿದ್ದ ತಿಲಕ್ ವರ್ಮಾ 37 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.
ಇನ್ನು ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 20 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಂಡೀಸ್ ಪರ ಅಲ್ಜಾರಿ ಜೋಸೆಫ್ 2 ಹಾಗೂ ಒಬೆದ್ ಮೆಕಾಯ್ 1 ವಿಕೆಟ್ ಪಡೆದರು. 160 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡ 17.5 ಓವರ್‌ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 164 ರನ್ ಗಳಿಸಿ ಈ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 1-2 ಹಿನ್ನಡೆ ಕಾಯ್ದುಕೊಂಡಿದೆ. ಮುಂಬರುವ ಪಂದ್ಯಗಳು ಶನಿವಾರ ಮತ್ತು ಭಾನುವಾರ ನಡೆಯಲಿದೆ.
ಓದಿ:IND vs WI 3rd T20: ಟಾಸ್ ಗೆದ್ದ ವಿಂಡೀಸ್ ಬ್ಯಾಟಿಂಗ್ ಆಯ್ಕೆ.. ಟೀಂ ಇಂಡಿಯಾಕ್ಕೆ ಯಶಸ್ವಿ ಜೈಸ್ವಾಲ್ ಪಾದಾರ್ಪಣೆ